ಭಾರತ ಸರ್ಕಾರವು ಸಂದೇಸ್ ಎಂಬ ತ್ವರಿತ ಮೆಸೇಜಿಂಗ್ ಪ್ಲಾಟ್ಫಾರಂನ್ನು ಆರಂಭಿಸಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.
ಫೇಸ್ಬುಕ್ ಒಡೆತನದ ವಾಟ್ಸಾಪ್ ಸೇರಿದಂತೆ ವಿವಿಧ ಖಾಸಗಿ ಮೆಸೆಜಿಂಗ್ ಅಪ್ಲಿಕೇಶನ್ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ಪರ್ಯಾಯ ಮಾರ್ಗವನ್ನು ಹುಡುಕಿದೆ.
ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಮಾಹಿತಿ ಕೇಂದ್ರವು ವಾಟ್ಸಾಪ್ ಮಾದರಿಯಲ್ಲೇ ಕಾರ್ಯ ನಿರ್ವಹಿಸುವ ಈ ಹೊಸ ವೇದಿಕೆಯನ್ನು ಆರಂಭಿಸಿದೆ. ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಸಹಾಯದಿಂದ ಎಲ್ಲಾ ರೀತಿಯ ಸಂವಹನ ಕಾರ್ಯಕ್ಕೆ ವೇದಿಕೆಯಾಗಿ ಬಳಕೆ ಮಾಡಬಹುದಾಗಿದೆ. ಈ ಸಂದೇಸ್ ಅಪ್ಲಿಕೇಶನ್ನ್ನು ಪ್ರಸ್ತುತ ಸರ್ಕಾರಿ ನೌಕರರು ಹಾಗೂ ಸರ್ಕಾರದೊಂದಿಗೆ ಸಂಪರ್ಕ ಹೊಂದಿರುವ ಏಜನ್ಸಿಗಳಲ್ಲಿ ಬಳಕೆ ಮಾಡಲಾಗುತ್ತಿದೆ.
ಸಂದೇಸ್ ಅಪ್ಲಿಕೇಶನ್ ಸುರಕ್ಷಿತ, ಓಪನ್ ಸೋರ್ಸ್ ಆಧಾರಿತ ವೇದಿಕೆಯಾಗಿದೆ. ಇದು ಸರ್ಕಾರಿ ಸ್ವಾಮ್ಯದ ವೇದಿಕೆಯಾಗಿದ್ದು ಸಂಪೂರ್ಣ ನಿಯಂತ್ರಣವು ಕೇಂದ್ರದ ಕೈಯಲ್ಲಿ ಇರಲಿದೆ. ಈ ಅಪ್ಲಿಕೇಶನ್ ಮೂಲಕ ಸಂದೇಶ ಕಳುಹಿಸುವಿಕೆ, ಫೈಲ್ ಹಾಗೂ ಫೋಟೋ, ವಿಡಿಯೋಗಳ ಹಂಚಿಕೆ ಮತ್ತು ಆಡಿಯೋ-ವಿಡಿಯೋ ಕರೆ ಮಾಡಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಭಾರತೀಯ ಅಪ್ಲಿಕೇಶನ್ ಹಾಗೂ ಸಾಫ್ಟ್ವೇರ್ಗಳ ಬಳಕೆಯನ್ನು ಉತ್ತೇಜಿಸುವ ಸರ್ಕಾರದ ಉಪಕ್ರಮದ ಭಾಗವಾಗಿ ಈ ಸಂದೇಸ್ ಅಪ್ಲಿಕೇಶನ್ ಅಭಿವೃದ್ಧಿ ಮಾಡಲಾಗಿದೆ. ಕಳೆದ ಅನೇಕ ತಿಂಗಳಿನಿಂದ ಖಾಸಗಿ ಮಾಹಿತಿ ಸೋರಿಕೆ ವಿಚಾರದಲ್ಲಿ ವಾಟ್ಸಾಪ್ ಹಾಗೂ ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಮೂಡಿರುವ ನಡುವೆಯೇ ಕೇಂದ್ರ ಸರ್ಕಾರ ಸಂದೇಸ್ ಅಪ್ಲಿಕೇಶನ್ ಮೂಲಕ ಮೆಸೆಜಿಂಗ್ ಅಪ್ಲಿಕೇಶನ್ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.