ಅಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮುಂಬೈನ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ತಮ್ಮ ಸೂಪರ್ ಕಾಪ್ ಖ್ಯಾತಿಯನ್ನು ಮರಳಿ ಪಡೆಯಲು ಯತ್ನಿಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ಚಾರ್ಜ್ಶೀಟ್ನಲ್ಲಿ ಹೇಳಿದೆ.
ಎನ್‌ಐಎ ಚಾರ್ಜ್ಶೀಟ್ನಲ್ಲಿರುವ ಮಾಹಿತಿಯ ಪ್ರಕಾರ, ಬಂಧನಕ್ಕೂ ಮುನ್ನ ಮುಂಬೈನ ಕ್ರೈಂ ಬ್ರ್ಯಾಂಚ್ನಲ್ಲಿ ಎಎಸ್ಐ ಆಗಿದ್ದ ಸಚಿನ್ ವಾಜೆ ಫೆಬ್ರವರಿ 25ರಂದು ಅಂಬಾನಿ ನಿವಾಸದ ಎದುರು ಸ್ಪೋಟಕಗಳಿಂದ್ದ ಎಸ್ಯುವಿಯನ್ನು ತಂದು ನಿಲ್ಲಿಸುವಲ್ಲಿ ಆರೋಪಿಗಳ ಜೊತೆ ಕೈ ಜೋಡಿಸಿದ್ದರು ಎಂದು ಹೇಳಿದೆ.
ಶ್ರೀಮಂತ ವ್ಯಕ್ತಿಗಳಿಗೆ ಬೆದರಿಕೆಯೊಡ್ಡುವ ಉದ್ದೇಶವು ಇಲ್ಲಿ ಸ್ಪಷ್ಟವಾಗಿತ್ತು. ಅಲ್ಲದೇ ಅವರಿಂದ ಹಣ ಸುಲಿಗೆ ಮಾಡುವ ಗುರಿ ಕೂಡ ಇತ್ತು ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ಜೈಶ್ ಉಲ್ ಹಿಂದ್ ಹೆಸರಿಗೂ ನಂಟು ಮಾಡಲಾಗಿತ್ತು.
ಬೆದರಿಕೆ ನೋಟ್ನಲ್ಲಿ ಮುಂದಿನ ಬಾರಿ ಬಾಂಬ್ಗಳು ಕನೆಕ್ಟ್ ಆಗಿ ಇರಲಿದೆ ಎಂದು ಹೇಳಲಾಗಿತ್ತು. ಈ ರೀತಿ ಸುಳ್ಳು ಪ್ರಕರಣದ ಮೂಲಕ ತಮ್ಮ ಹಾಳಾಗಿದ್ದ ಪ್ರತಿಷ್ಠೆಯನ್ನು ಪುನಃ ಪಡೆಯಲು ವಾಝೆ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.
ಎನ್‌ಐಎ ಚಾರ್ಜ್ಶೀಟ್ನ ಪ್ರಕಾರ, ವಾಝೆ ಎಸ್ಯುವಿ ಕಾರನ್ನು ಅಂಬಾನಿ ನಿವಾಸದ ಎದುರು ನಿಲ್ಲಿಸಿ ಬೆದರಿಕೆ ಪತ್ರವನ್ನೂ ಇಟ್ಟಿದ್ದರು ಎಂದು ಹೇಳಿದೆ.
ಮೊದಲು ಈ ಪ್ರಕರಣವನ್ನು ವಾಝೆ ಕೈಗೆತ್ತಿಕೊಂಡಿದ್ದರು. ಟೆಲಿಗ್ರಾಂ ಚಾನೆಲ್ನ ಮೂಲಕ ಈ ಪ್ರಕರಣಕ್ಕೆ ಭಯೋತ್ಪಾದನೆಯ ಬಣ್ಣ ಬಳಿಯಲು ಯತ್ನಿಸಿದ್ದರು. ಆದರೆ ಎಸ್ಯುವಿ ಮಾಲೀಕ ಹಿರೇನ್ ಸಾವಿನ ಬಳಿಕ ವಾಝೆ ಪ್ಲಾನ್ ಒಂದೊಂದಾಗಿ ಬೆಳಕಿಗೆ ಬಂದಿದೆ.
ಪತಿಯ ಅನುಮಾನಾಸ್ಪದ ಸಾವಿನಲ್ಲಿ ವಾಝೆ ಪಾತ್ರವಿದೆ ಎಂದು ಹಿರೇನ್ ಪತ್ನಿ ಅನುಮಾನ ವ್ಯಕ್ತಪಡಿಸಿ ಬಳಿಕ ಪ್ರಕರಣ ರೋಚಕ ತಿರುವು ಪಡೆದುಕೊಂಡಿತ್ತು.