alex Certify ಠಾಣೆಗಳಿಗೆ ಸಿಸಿ ಟಿವಿ ಅಳವಡಿಸಲು 60 ಕೋಟಿ ರೂ. ವ್ಯರ್ಥ…! ಬಾಂಬೆ ಹೈಕೋರ್ಟ್ ಅಭಿಮತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಠಾಣೆಗಳಿಗೆ ಸಿಸಿ ಟಿವಿ ಅಳವಡಿಸಲು 60 ಕೋಟಿ ರೂ. ವ್ಯರ್ಥ…! ಬಾಂಬೆ ಹೈಕೋರ್ಟ್ ಅಭಿಮತ

ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆಯ ಸ್ಥಿತಿಗತಿ ಕುರಿತು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ವರದಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಇಡೀ ಪ್ರಕ್ರಿಯೆಯು ದೊಡ್ಡ “ಪ್ರಹಸನ”ವಾಗಿದೆ, ಯೋಜನೆಗೆ ನಿಗದಿಪಡಿಸಿದ ಹಣ ವ್ಯರ್ಥವಾಗಿದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್ ಜೆ ಕಥಾವಲ್ಲಾ ಮತ್ತು ಎಂ ಎನ್ ಜಾಧವ್ ಅವರ ವಿಭಾಗೀಯ ಪೀಠವು ಕಳೆದ ವಾರ ಎಲ್ಲಾ ಪೊಲೀಸ್ ಠಾಣೆಗಳಲ್ಲಿನ ಕ್ರಿಯಾತ್ಮಕ ಮತ್ತು ಕಾರ್ಯನಿರ್ವಹಿಸದ ಸಿಸಿ ಟಿವಿಗಳ ಬಗ್ಗೆ ಸಂಪೂರ್ಣ ವಿವರದ ವರದಿ ನೀಡಿ ಎಂದು ಸರ್ಕಾರಕ್ಕೆ ಆದೇಶ ನೀಡಿತ್ತು.

ಮಹಾರಾಷ್ಟ್ರದ ನಿರ್ದಿಷ್ಟ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿಗಳು ಕಳೆದ ಎರಡು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅರ್ಜಿಯ ವಿಚಾರಣೆಯ ವೇಳೆ,‌ ನ್ಯಾಯಾಲಯ ಈ ಆದೇಶ ನೀಡಿತ್ತು. ಈ ವೇಳೆ 2020ರಲ್ಲಿ ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿತ್ತು.

ಮಂಗಳವಾರ ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ನ್ಯಾಯಾಲಯ ಕೋರಿದ ಸಂಬಂಧಿತ ವಿವರಗಳಿಲ್ಲ. ವರದಿಯು ನ್ಯಾಯಾಲಯ ಕೇಳಿದ ಮಾಹಿತಿಯಿಂದ ದೂರವಿದೆ ಎಂಬುದನ್ನ ಪೀಠವು ಗಮನಿಸಿತು. ನ್ಯಾಯಾಲಯವು ಆದೇಶವನ್ನು ಜಾರಿಗೊಳಿಸಿದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ.‌ ನಾವು ಅವರಿಗೆ ಆಡಳಿತದ ಸ್ಪೂನ್ ಫೀಡ್ ಮಾಡಬೇಕೆ? ಅವರ ಬದಲು ನಾವು ಆಡಳಿತ ನಡೆಸಬೇಕೆ ಎಂದು ನ್ಯಾಯಾಲಯ ಸರ್ಕಾರದ ವಿಳಂಬ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.‌

ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಭಾವಿಸಿ ಒಬ್ಬ ಸಾಮಾನ್ಯ ವ್ಯಕ್ತಿ ಪೊಲೀಸ್ ಠಾಣೆಗೆ ಹೋಗುತ್ತಾನೆ. ಸಿಸಿ ಟಿವಿ ಅಳವಡಿಕೆ ಯೋಜನೆಗೆ ರಾಜ್ಯವು ನಿಗದಿಪಡಿಸಿದ 60 ಕೋಟಿ ರೂ.ಗೆ ಏನಾಗುತ್ತಿದೆ ಎಂದು ನಮಗೆ ತಿಳಿದಿಲ್ಲ ಎಂದು ನ್ಯಾಯಮೂರ್ತಿ ಕಥಾವಲ್ಲಾ ಹೇಳಿದರು.

ನಿಷ್ಠಾವಂತ ಉದ್ಯೋಗಿಗೆ ಐಷಾರಾಮಿ ಬೆನ್ಜ್ ಕಾರ್ ಉಡುಗೊರೆ ಕೊಟ್ಟ ಮಾಲೀಕ…!

ಸರಕಾರ ಸಲ್ಲಿಸಿರುವ ವರದಿ ಪ್ರಕಾರ ರಾಜ್ಯದಲ್ಲಿ 1,089 ಪೊಲೀಸ್ ಠಾಣೆಗಳಿವೆ. ಇದುವರೆಗೆ 547 ಪೊಲೀಸ್ ಠಾಣೆಗಳಲ್ಲಿ 6,092 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 5,639 ಕಾರ್ಯನಿರ್ವಹಿಸುತ್ತಿದ್ದು, ಉಳಿದವು ನಿಷ್ಕ್ರಿಯವಾಗಿವೆ. ಸರ್ಕಾರದ ವರದಿಯಂತೆ ಪ್ರತಿ ಪೊಲೀಸ್ ಠಾಣೆಯಲ್ಲಿ ಸಿಸಿ ಟಿವಿ ಅಳವಡಿಕೆಗೆ 6 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.‌ ನನ್ನ ಮನೆಯಲ್ಲೂ ಸಿಸಿ ಟಿವಿಗಳು ಇವೆ, ಆದರೆ ಅದಕ್ಕಾಗಿ ನಾನು 35,000 ರೂ.ಗಿಂತ ಹೆಚ್ಚು ಖರ್ಚು ಮಾಡಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಜಾಧವ್, 6 ಲಕ್ಷ ರೂಪಾಯಿ ಖರ್ಚು ಮಾಡಿದ ನಂತರವೂ ಸಿಸಿ ಟಿವಿಗಳ ರೆಕಾರ್ಡಿಂಗ್ ಅವಧಿಯು ಏಕೆ ದೀರ್ಘವಾಗಿಲ್ಲ ಎಂದು ಕೇಳಿದರು.

ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರು ಅವರು ಅದನ್ನು ಪಾಲಿಸಲು ಸಿದ್ಧವಾಗಿಲ್ಲ. ಅವರಿಗೆ ಪೊಲೀಸ್ ಠಾಣೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಯಾವುದೇ ನ್ಯಾಯಾಲಯ ಅಥವಾ ಅಧಿಕಾರಿಗಳಿಗೆ ತೋರಿಸುವ ಬಯಕೆಯಿಲ್ಲ‌. ಇದೆಲ್ಲವೂ ಒಂದು ಪ್ರಹಸನ(ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ನಾಟಕ). ಅವರು ಠಾಣೆಗಳಲ್ಲಿ ಏನಾಗುತ್ತಿದೆ ಎಂಬುದು ನ್ಯಾಯಾಲಯಕ್ಕೆ ತಿಳಿಯಬಾರದು ಎಂದುಕೊಂಡಿರಬೇಕು. ಸುಮ್ಮನೆ 60 ಕೋಟಿ ರೂ. ವ್ಯರ್ಥವಾಗಿದೆ ಎಂದು ನ್ಯಾಯಮೂರ್ತಿ ಕಥಾವಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.

ಪೀಠವು ಮುಂದಿನ ವಿಚಾರಣೆಯನ್ನು ಫೆಬ್ರವರಿ 21 ರಂದು ನಿಗದಿಪಡಿಸಿದೆ. ಅಲ್ಲದೇ ಈ ವಿಷಯದ ಬಗ್ಗೆ ನ್ಯಾಯಾಲಯಕ್ಕೆ “ಸಕ್ರಿಯ ನೆರವು” ನೀಡುವಂತೆ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರನ್ನು ಕೇಳಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...