ಇನ್ನೊಬ್ಬರಿಗೆ ಸಹಾಯ ಮಾಡುವುದು ನಿಮ್ಮಿಂದ ಸಾಧ್ಯ ಎಂದಾದಲ್ಲಿ ನೆರವಿನ ಹಸ್ತ ಚಾಚೋದು ನಿಜಕ್ಕೂ ಒಂದು ಮಾನವೀಯ ಕಾರ್ಯವೇ ಸರಿ…!
ಅಂದಹಾಗೆ ಈ ಮಾತನ್ನು ಹೇಳೋದಕ್ಕೆ ಕಾರಣ ಕೂಡ ಇದೆ. ಲಾಟರಿ ಗೆದ್ದಿದ್ದ ಬ್ರಿಟನ್ನ ದಂಪತಿ ತಮಗೆ ಬಂದಿದ್ದ ಹಣದಲ್ಲಿ ಬಹುಪಾಲು ಹಣವನ್ನು 30 ಮಂದಿಗೆ ದಾನ ಮಾಡುವ ಮೂಲಕ ಅನೇಕರಿಗೆ ಮಾದರಿ ಎನಿಸಿದ್ದಾರೆ.
ಶೆರೋನ್ ಹಾಗೂ ನಿಗೆಲ್ ಎಂಬವರು ಎರಿಯೊಮಿಲಿಯನ್ಸ್ ಲಾಟರಿ ಜಾಕ್ಪಾಟ್ನಲ್ಲಿ ಬರೋಬ್ಬರಿ 170 ಮಿಲಿಯನ್ ಡಾಲರ್ ಹಣವನ್ನು ಗೆದ್ದಿದ್ದರು. ಕೆಲ ಸಮಯದ ಕಾಲ ಇವರಿಬ್ಬರು ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಅವರಿಗೆ ಹಣ ಸಿಗೋದು ಖಚಿತವಾಗುತ್ತಿದ್ದಂತೆಯೇ, ತಮ್ಮ ಸ್ನೇಹಿತರು ಹಾಗೂ ಸಂಬಂಧಿಗಳು ಸೇರಿದಂತೆ ಮೂವತ್ತು ಮಂದಿಗೆ ಚೆಕ್ ವಿತರಣೆ ಮಾಡುವ ಮೂಲಕ ಸಪ್ರೈಸ್ ನೀಡಿದ್ದಾರೆ. ಬಹುಮಾನದ ಮೊತ್ತವನ್ನು ಹಂಚಿಕೆ ಮಾಡುವ ಮೂಲಕ ಈ ದಂಪತಿ ತಮ್ಮ ವಿಜಯವನ್ನು ವಿಶೇಷ ಅರ್ಥದಲ್ಲಿ ಆಚರಣೆ ಮಾಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಶೆರೋನ್, ನಾವು ನಮ್ಮ ವಿಜಯವನ್ನು ಒಬ್ಬರೇ ಆಚರಿಸಿ ಶೋ ಆಫ್ ಮಾಡುವ ಉದ್ದೇಶ ಹೊಂದಿರಲಿಲ್ಲ. ನಮಗೆ ಹತ್ತಿರವಾದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿತ್ತು. ನನ್ನ ಪತಿ ಹೋಟೆಲ್ ಮ್ಯಾನೇಜರ್ ಆಗಿದ್ದಾರೆ. ನಾವಿಬ್ಬರು ಸೇರಿ 30 ಮಂದಿಯ ಪಟ್ಟಿಯನ್ನು ತಯಾರು ಮಾಡಿದೆವು. ನಮಗೆ 2 ಮಕ್ಕಳು ಇರೋದ್ರಿಂದ ಪ್ರತಿಯೊಬ್ಬರಿಗೂ ಸಹಾಯ ಮಾಡೋದು ನಮ್ಮಿಂದ ಸಾಧ್ಯವಾಗುವ ಕೆಲಸವಲ್ಲ. ಹೀಗಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ ಎಂಬ ತೃಪ್ತಿ ಇದೆ ಎಂದು ಹೇಳಿದ್ರು.