ಯಾರ ಪಾಲಾಗಲಿದ್ದಾನೆ ‘ಮಹಾರಾಜ’ ಎಂಬ ಬಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಸರ್ಕಾರದ ಅಧೀನಲ್ಲಿರುವ ಏರ್ ಇಂಡಿಯಾ ಕಂಪನಿಯು ಟಾಟಾ ಗ್ರೂಪ್ ಪಾಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ಬರೋಬ್ಬರಿ 68 ವರ್ಷಗಳ ಬಳಿಕ ಏರ್ ಇಂಡಿಯಾ ಟಾಟಾ ಸನ್ಸ್ ತೆಕ್ಕೆಗೆ ಮರಳಿದಂತಾಗಿದೆ.
ಕೇಂದ್ರ ಸರ್ಕಾರದ ಪಾಲಿಗೆ ಬಿಳಿಯಾನೆಯಂತಾಗಿದ್ದ ಏರ್ ಇಂಡಿಯಾದ 100 ಪ್ರತಿಶತ ಷೇರುಗಳನ್ನ ಮಾರಾಟ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಏರ್ ಇಂಡಿಯಾ ಕಂಪನಿಯು ಬಿಡ್ಡಿಂಗ್ನಲ್ಲಿ ಗೆಲುವು ಸಾಧಿಸಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಅಂದಹಾಗೆ ಟಾಟಾ ಸನ್ಸ್ 18 ಸಾವಿರ ಕೋಟಿ ರೂಪಾಯಿಗಳಿಗೆ ಬಿಡ್ಡಿಂಗ್ ಮಾಡಿತ್ತು.
ಏರ್ ಇಂಡಿಯಾವನ್ನು ಖರೀದಿ ಮಾಡಲು 7 ಕಂಪನಿಗಳು ಮುಂದಾಗಿದ್ದವು. ಈ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವವನ್ನು ಏರ್ ಇಂಡಿಯಾ ಉದ್ದೇಶಿತ ಪರ್ಯಾಯ ಕಾರ್ಯ ನಿರ್ವಹಣಾ ಸಂಸ್ಥೆಯು ಪರಿಶೀಲನೆ ಮಾಡಿತ್ತು. ಇದೇ ತಂಡವು ಏರ್ ಇಂಡಿಯಾ ವನ್ನು ಟಾಟಾ ಸನ್ಸ್ಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದೆ. ಸದ್ಯ ಏರ್ ಇಂಡಿಯಾ ಮಾಲೀಕತ್ವ ವಾಪಸ್ ಪಡೆದಿರುವ ಟಾಟಾ ಸನ್ಸ್ ಹೆಗಲ ಮೇಲೆ 15,300 ಕೋಟಿ ರೂಪಾಯಿ ಸಾಲದ ಹೊರೆ ಕೂಡ ಬಿದ್ದಿದೆ ಎಂಬ ಮಾತನ್ನು ಕಡೆಗಣಿಸುವಂತಿಲ್ಲ.