alex Certify ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಭರಪೂರ ಮೀಸಲಾತಿ : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಭರಪೂರ ಮೀಸಲಾತಿ : ಸಿಎಂ ಸಿದ್ದರಾಮಯ್ಯ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ 2013ರಲ್ಲಿ ಜಾರಿಗೆ ಬಂದು ಇದೀಗ ಹತ್ತು ವರ್ಷ ಪೂರೈಸಿದ್ದು, ಕಳೆದ ಒಂದು ದಶಕದಲ್ಲಿ ಪ್ರದೇಶದಲ್ಲಿ ಮೂಲಸೌಕರ್ಯ ಬಲವರ್ದನೆಗೆ 8,520 ಕೋಟಿ ರೂ. ಖರ್ಚು ಮಾಡಲಾಗಿದೆ. ಇದಲ್ಲದೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸತಳೀಯರಿಗೆ ಭರಪೂರ ಮೀಸಲಾತಿ ಸೌಲಭ್ಯ ಸಿಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವಿವಾರ ಕಲಬುರಗಿ ನಗರದ ಡಿ.ಎ.ಅರ್.ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2013-14 ರಿಂದ 2022-23ರ ವರೆಗೆ ಸರ್ಕಾರದಿಂದ ಒಟ್ಟಾರೆ 11,878.33 ಕೋಟಿ ರೂ. ಅನುದಾನ ಹಂಚಿಕೆ ಮಾಡಿ 10,228.80 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 8,520.74 ಕೋಟಿ ರೂ. ಖರ್ಚು ಮಾಡಲಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಶೇ.83 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 29,215 ಕಾಮಗಾರಿಗಳು ಕೈಗೆತ್ತಿಕೊಂಡು 24,563 ಕಾಮಗಾರಿ ಪೂರ್ಣಗೊಳಿಸಿದ್ದು, 4,652 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳು ಪ್ರದೇಶದ ಚಿತ್ರ ಬದಲಿಸಿವೆ ಎಂದರೆ ತಪ್ಪಾಗಲಾರದು ಎಂದರು.

ಕಾಯ್ದೆ ಆರಂಭದಿಂದ ಕಳೆದ ಆಗಸ್ಟ್ ಅಂತ್ಯಕ್ಕೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ ಒಟ್ಟು 98,889 ಹುದ್ದೆ ನೇರ ನೇಮಕಾತಿಗೆ ಗುರುತಿಸಿದ್ದು, ಅದರಲ್ಲಿ 70,738 ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 33,371 ಹುದ್ದೆಗಳ ಪೈಕಿ 23,101 ಜನರಿಗೆ ಮುಂಬಡ್ತಿ ನೀಡಲಾಗಿದೆ. ಇನ್ನು ಖಾಲಿ ಉಳಿದ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

2014-15 ರಿಂದ 2022-23ನೇ ಶೈಕ್ಷಣಿಕ ಸಾಲಿನ ವರೆಗೆ 6,795 ಅಭ್ಯರ್ಥಿಗಳು ವೈದ್ಯಕೀಯ, 1,388 ಅಭ್ಯರ್ಥಿಗಳು ದಂತ ವೈದ್ಯಕೀಯ, 3448 ಅಭ್ಯರ್ಥಿಗಳು ಹೋಮಿಯೋಪತಿ, 22,219 ಅಭ್ಯರ್ಥಿಗಳು ಇಂಜಿನೀಯರಿಂಗ್, 3,808 ಅಭ್ಯರ್ಥಿಗಳು ಕೃಷಿ ಸಂಬಂಧಿತ, 1,593 ಅಭ್ಯರ್ಥಿಗಳು ಬಿ.ಫಾರ್ಮಸಿ/ ಡಿ.ಫಾರ್ಮಸಿ ಸೇರಿದಂತೆ ಒಟ್ಟಾರೆ 10 ವರ್ಷದಲ್ಲಿ ಪ್ರದೇಶದ 39,251 ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.

371 (ಜೆ) ಕಾಯ್ದೆ ಜಾರಿಗೆ ರಾಷ್ಟ್ರಪತಿಗಳು ಅಂಕಿತ ನೀಡಿದ ಕೂಡಲೇ ಅಂದು 2013ರಲ್ಲಿ ರಾಜ್ಯದಲ್ಲಿದ್ದ ನಮ್ಮದೆ ಸರ್ಕಾರ ಕೂಡಲೆ ಪ್ರದೇಶ ಮಂಡಳಿ ರಚಿಸಿದಲ್ಲದೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಸ್ಥಳೀಯರನ್ನು ಮೀಸಲಾತಿ ಸೌಲಭ್ಯ ಒದಗಿಸುವ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಈ ಭಾಗದ ಅಭಿವೃದ್ಧಿಯ ಹೊಸ ಶಕೆಗೆ ಚಾಲನೆ ನೀಡಲಾಗಿತ್ತು ಎಂದರು.

ಕಲ್ಯಾಣದ ಪ್ರದೇಶ ಅಭಿವೃದ್ಧಿಯಾಗದ ಹೊರತು ನಾಡಿನ ಸಮಗ್ರ ಪ್ರಗತಿ ಅಸಾಧ್ಯ ಎಂದು ನಂಬಿರುವ ನಮ್ಮ ಸರ್ಕಾರ ಪ್ರಸಕ್ತ 2023-24ನೇ ಸಾಲಿನ ಆಯವ್ವಯದಲ್ಲಿ ದಾಖಲೆ ಪ್ರಮಾಣದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ 5,000 ಕೋಟಿ ರೂ. ಘೋಷಿಸಲಾಗಿದೆ. ಮಂಡಳಿ ಇನ್ನಷ್ಟು ದಕ್ಷತೆಯಿಂದ, ಪಾರದರ್ಶಕವಾಗಿ ಹಾಗೂ ಅಗತ್ಯತೆಗಳನ್ನು ಆಧರಿಸಿ ಯೋಜನೆಗಳ ಅನುಷ್ಠಾನಗೊಳಿಸುವ ಅಗತ್ಯವನ್ನು ನಮ್ಮ ಸರ್ಕಾರ ಮನಗಂಡಿದೆ. ಇದಕ್ಕಾಗಿ  ಡಾ.ಅಜಯ್ ಸಿಂಗ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ಸ್ಥಾಪಿಸಲಾಗಿದೆ ಎಂದ ಅವರು 371ಜೆ ಕಾಯ್ದೆ ಪರಿಣಾಮಕಾರಿಗಳ ಅನುಷ್ಟಾನದ ಮೇಲುಸ್ತುವಾರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿಯೇ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ ಎಂದರು.

ಕೆ.ಕೆ.ಆರ್.ಡಿ.ಬಿ. ಮಂಡಳಿಯ 182.65 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು ಮುಂದಿನ 3-4 ತಿಂಗಳಿನಲ್ಲಿ ಉದ್ಘಾಟಿಸಲಾಗುವುದು. ಮಂಡಳಿಯ 58.52 ಕೋಟಿ ನೆರವಿನೊಂದಿಗೆ ಕಲಬುರಗಿ ವಿಮಾನ ನಿಲ್ದಾಣ  ನಿರ್ಮಿಸಿದ್ದು, ಗಗನದಲ್ಲಿ ಹಾರಾಡಬೇಕೆಂಬ ಇಲ್ಲಿನವರ ಕನಸು ನನಸಾಗಿದೆ. ಇದರಿಂದ ಈ ಭಾಗದ ಕೈಗಾರಿಕೆ, ಶಿಕ್ಷಣ, ಕೃಷಿ, ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ನೆರವಾಗಿದೆ. ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕಲಬುರಗಿ ಮತ್ತು ಕೊಪ್ಪಳದಲ್ಲಿ ವೈದ್ಯಕೀಯ ಕಾಲೇಜು, ಕಲಬುರಗಿಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಾಗಿದೆ. ಇದೀಗ 70 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಲಬುರಗಿಯಲ್ಲಿ ತೆರೆಯಲಾಗುತ್ತದೆ. ಒಟ್ಟಾರೆಯಾಗಿ ಕಲಬುರಗಿ ಕೇಂದ್ರೀತವಾಗಿ ಕಲ್ಯಾಣ ಭಾಗದಲ್ಲಿ ಆರೋಗ್ಯ ಸೇವೆ ಮತ್ತಷ್ಟು ಉತ್ತಮಗೊಂಡಿದ್ದು, ಕಲಬುರಗಿ ಮೆಡಿಕಲ್ ಹಬ್” ಆಗಿ ಪರಿವರ್ತನೆಯಾಗಿದೆ ಎಂದರು.

ಕಳೆದ ಹತ್ತು ವರ್ಷದಲ್ಲಿ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಸಾರಿಗೆ, ಮೂಲಸೌಕರ್ಯ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಮಂಡಳಿ ಅವಿರತವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅಭಿವೃದ್ಧಿ ಎಂದರೆ ಕೇವಲ ಹೆದ್ದಾರಿ, ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳು ಮಾತ್ರವಲ್ಲ; ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ಹಾಗೂ ಸಾಮಾಜಿಕ ಭದ್ರತಾ ಭಾವವೂ ಮುಖ್ಯವಾಗುತ್ತದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...