ಕ್ರಿಪ್ಟೋ ಕರೆನ್ಸಿಗಳ ಮೇಲಿನ ನಿಷೇಧ ಪೂರ್ಣ ಪ್ರಮಾಣದಲ್ಲಿ ಮಾಡಿದರೆ ಮಾತ್ರವೇ ಸೂಕ್ತ ಎಂದಿರುವ ರಿಸರ್ವ್ ಬ್ಯಾಂಕ್, ಈ ಸಂಬಂಧ ತರುವ ಅರೆ ನಿಷೇಧಗಳೆಲ್ಲಾ ಕೆಲಸ ಮಾಡುವುದಿಲ್ಲ ಎಂದಿದೆ.
ವಹಿವಾಟುಗಳನ್ನು ಟ್ರಾಕ್ ಮಾಡುವ ವಿಚಾರ, ಕ್ರಿಪ್ಟೋಗಳ ಮೌಲ್ಯೀಕರಣ, ಬೆಲೆಗಳಲ್ಲಿ ಅಸ್ಥಿರತೆ, ಕಾನೂನಾತ್ಮಕ ವಿಷಯಗಳು ಮತ್ತು ಕ್ರಿಪ್ಟೋ ವ್ಯವಹಾರಗಳಲ್ಲಿ ಭಾಗಿಯಾಗಿರುವ ಮೂಲಗಳನ್ನು ಪತ್ತೆ ಮಾಡುವುದು ದೊಡ್ಡ ಸವಾಲಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಕೊಟ್ಟ ಪ್ರೆಸೆಂಟೇಷನ್‌ನಲ್ಲಿ ಆರ್.ಬಿ.ಐ ತಿಳಿಸಿದೆ.
ಈ ನಿಟ್ಟಿನಲ್ಲಿ ತೀವ್ರವಾದ ಹೆಜ್ಜೆಗಳನ್ನು ಇಟ್ಟರೂ ಕಷ್ಟವೆಂದ ಮಂಡಳಿ ಸದಸ್ಯ ಸಚಿನ್ ಚತುರ್ವೇದಿ (ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಾಜಿ ನಿರ್ದೇಶಕ), ಹೀಗೆ ಮಾಡಿದಲ್ಲಿ ಜಾಗತಿಕ ಮಟ್ಟದಲ್ಲಿ ಸಂಪರ್ಕ ಕಡಿದುಕೊಳ್ಳುವ ಅಪಾಯವಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಸಹ ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟು ಹಿಂದಕ್ಕೆ ಬರುವಂತೆ ಆಗಿದ್ದ ನಿದರ್ಶನಗಳನ್ನು ಸಚಿನ್ ಇದೇ ವೇಳೆ ಕೊಟ್ಟಿದ್ದಾರೆ.
ಬುಕ್ ಮಾಡಿದರೆ ಸಾಕು….! ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಿಸ್ಲೇರಿ ನೀರು
ಕೇಂದ್ರ ಬ್ಯಾಂಕ್‌ನ ಕೇಂದ್ರ ಮಂಡಳಿಯ 592ನೇ ಸಭೆ ಸಂದರ್ಭದಲ್ಲಿ ಆರ್.ಬಿ.ಐ.ನ ಡಿಜಿಟಲ್ ಕರೆನ್ಸಿ ಕುರಿತಾಗಿಯೂ ಮಾತನಾಡಲಾಗಿದೆ. ಇದೇ ವೇಳೆ, ಸೆಪ್ಟೆಂಬರ್ 30, 2021ರಂತೆ ಆರು ತಿಂಗಳ ಮಟ್ಟದ ಆದಾಯದ ಸ್ಟೇಟ್‌ಮೆಂಟ್ ಅನ್ನೂ ಸಹ ಮಂಡಳಿ ಕೈಗೆತ್ತಿಕೊಂಡಿದೆ.
ಕ್ರಿಪ್ಟೋಕರೆನ್ಸಿ ಮತ್ತು ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021ಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲು ಕೇಂದ್ರ ಸಂಪುಟ ಸಿದ್ಧತೆ ಮಾಡಿಕೊಂಡಿರುವ ಬೆನ್ನಲ್ಲೇ ಈ ಸಭೆ ಮಹತ್ವ ಪಡೆದಿದೆ. ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಲು ಶಾಸನಾತ್ಮಕ ಚೌಕಟ್ಟನ್ನು ನಿರ್ಮಿಸುವ ಮತ್ತು ಕ್ರಿಪ್ಟೋ ಕರೆನ್ಸಿಗಳನ್ನು ಕೆಲವೊಂದು ಕ್ಷೇತ್ರಗಳಲ್ಲಿ ಬಳಸಲು ಸಡಿಲಿಕೆ ನೀಡುವ ಮೂಲಕ ಅದರಲ್ಲಿ ಅಡಕವಾದ ತಂತ್ರಜ್ಞಾನವನ್ನು ಉತ್ತೇಜಿಸುವ ಅಂಶಗಳನ್ನು ಮಸೂದೆ ಒಳಗೊಂಡಿದೆ.
ಪರ್ಯಾಯ ಕರೆನ್ಸಿಗಳಿಗೆ ಮಾನ್ಯತೆ ನೀಡುವ ವಿಚಾರದಲ್ಲಿ ಆರ್.ಬಿ.ಐ. ಯಾವಾಗಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಕ್ರಿಪ್ಟೋಕರೆನ್ಸಿ ಮೇಲೆ 2018ರಲ್ಲಿ ನಿಷೇಧ ತಂದಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶವೊಂದರಿಂದಾಗಿ ಆರ್.ಬಿ.ಐ. ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗಿತ್ತು.