ಕೈಗಾರಿಕೋದ್ಯಮಿ ರತನ್ ಟಾಟಾ ಮುಂಬೈನ ತಾಜ್ ಉದ್ಯೋಗಿಯ ಮಾನವೀಯ ಮೌಲ್ಯವನ್ನು ಶ್ಲಾಘಿಸಿದ್ದಾರೆ. ಈ ಮೂಲಕ ತಾಜ್ ಮಹಲ್ ಉದ್ಯೋಗಿಿ, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ತಾಜ್ ಉದ್ಯೋಗಿ ಶ್ವಾನವೊಂದಕ್ಕೆ ಛತ್ರಿಯನ್ನು ಹಿಡಿದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ವೈರಲ್ ಆಯ್ತು ಅಂದರೆ ಕೈಗಾರಿಕೋದ್ಯಮಿ ರತನ್ ಟಾಟಾರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.
ಈ ಫೋಟೋವನ್ನು ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಶೇರ್ ಮಾಡಿರುವ ರತನ್ ಟಾಟಾ, ಈ ತಾಜ್ ಉದ್ಯೋಗಿಯು ಜೋರಾದ ಮಳೆ ಸುರಿಯುತ್ತಿದ್ದ ವೇಳೆ ಶ್ವಾನದ ಜೊತೆ ಛತ್ರಿ ಹಂಚಿಕೊಳ್ಳುವಷ್ಟು ದಯಾಗುಣವನ್ನು ಹೊಂದಿದ್ದಾರೆ. ಈ ಅವಿಸ್ಮರಣೀಯ ಕೆಲಸವನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯಲಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
ರತನ್ ಟಾಟಾರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ತಾಜ್ ಉದ್ಯೋಗಿಯ ಮಾನವೀಯ ಮೌಲ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ.