ಕೊರೊನಾ ಎರಡನೆ ಅಲೆ ವಿರುದ್ಧ ಸಂಪೂರ್ಣ ದೇಶ ಹೋರಾಡುತ್ತಿದೆ. ಜನರನ್ನ ಉಳಿಸಲು ಸರ್ಕಾರ ಪ್ರಯತ್ನ ಪಡುತ್ತಿರೋ ನಡುವೆಯೇ ಅನೇಕ ಸಹೃದಯಿಗಳು ಈ ಹೋರಾಟದ ಜೊತೆ ಕೈ ಜೋಡಿಸಿದ್ದಾರೆ. ಕಷ್ಟದಲ್ಲಿರುವವವರಿಗೆ ಸಹಾಯ ಮಾಡಿದ ಸಾಕಷ್ಟು ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ.
ಒಡಿಶಾದ ಗೋಲಮುಂಡಾ ಬ್ಲಾಕ್ನ ಮಕ್ಲಾ ಗ್ರಾಮದ ರಾಧಿಕಾ ಜುವಾಡ್ ಎಂಬವರು ಭವಿನ್ ಪಟ್ನಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಜೆರಿಯನ್ ಹೆರಿಗೆಗೆ ಒಳಗಾಗಿದ್ದ ವೇಳೆ ಇದೇ ರೀತಿ ಸಹಾಯವನ್ನ ಪಡೆದಿದ್ದಾರೆ.
ಹೆರಿಗೆ ಬಳಿಕ ರಾಧಿಕಾ ಮಗುವನ್ನ ಕಳೆದುಕೊಂಡು ಮಾತ್ರವಲ್ಲದೇ ಒ ಪಾಸಿಟಿವ್ ರಕ್ತದ ಅವಶ್ಯಕತೆಯಿಂದ ಪರಿತಪಿಸಿದ್ದರು. ಇದೊಂದು ಬಾಂಬೆ ಫಿನೋಟೈಪ್ ಗುಂಪಿಗೆ ಸೇರಿದ್ದು ಅತ್ಯಂತ ವಿರಳವಾದ ರಕ್ತದ ಮಾದರಿಯಾಗಿತ್ತು.
ಕಾಲಹಂಡಿಯಲ್ಲೆಲ್ಲೂ ಈ ರಕ್ತ ಸಿಗದೇ ಇದ್ದ ಕಾರಣ ಕುಟುಂಬಸ್ಥರು ಜಿಲ್ಲೆಯಾದ್ಯಂತ ದಾನಿಗಳಿಗಾಗಿ ಹುಡುಕಾಟ ನಡೆಸಿದ್ದರೂ ಸಹ ರಕ್ತವನ್ನ ಸಂಗ್ರಹಿಸುವಲ್ಲಿ ವಿಫಲರಾಗಿದ್ದರು.
ಭುವನೇಶ್ವರದ ಕಲಿಂಗಾ ಫೌಂಡೇಶನ್ನ ಸಹಾಯದಿಂದ ಸೋಶಿಯಲ್ ಮೀಡಿಯಾದ ಕಾರ್ಯಕರ್ತರು ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ. ಈ ಫೌಂಡೇಶನ್ ಇಬ್ಬರು ದಾನಿಗಳನ್ನ ಹುಡುಕುವಲ್ಲಿ ಯಶಸ್ವಿಯಾಗಿತ್ತು. ರಕ್ತದಾನಿಗಳಾದ ದುರ್ಲವಾ ಕುಮಾರ್ ಸಾಹು ಹಾಗೂ ಮಾನಸ್ ರಂಜನ್ ಪ್ರಧಾನ್ ಎಂಬವರು ಕೂಡಲೇ ಆಸ್ಪತ್ರೆ ಬಳಿಗೆ ಧಾವಿಸಿದ್ದರು. ಈ ರೀತಿ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದ್ದಕ್ಕಾಗಿ ನಮಗೆ ಹೆಮ್ಮೆ ಇದೆ ಎಂದು ದುರ್ಲವ ಹಾಗೂ ಮಾನಸ್ ಹೇಳಿದ್ದಾರೆ. ಇವರಿಬ್ಬರೂ ರಾಧಿಕಾಗಾಗಿ ರಕ್ತದಾನ ಮಾಡುವ ಮೂಲಕ ಆಕೆಯ ಜೀವವನ್ನ ಕಾಪಾಡಿದ್ದಾರೆ.