
ರಾಮನಗರ: ದುಷ್ಕರ್ಮಿಯೊಬ್ಬ ರಸ್ತೆಗೆ 10 ರೂಪಾಯಿ ನೋಟು ಬಿಸಾಕಿ ಹಣ ಬಿದ್ದಿದೆ ಎಂದು ಹೇಳಿ ವ್ಯಕ್ತಿ ಬಳಿ ಇದ್ದ 1 ಲಕ್ಷ ರೂಪಾಯಿ ಹಣ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ನಡೆದಿದೆ.
ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡವರು. ರಾಘವೇಂದ್ರ ಕೆನರಾ ಬ್ಯಾಂಕ್ ನಿಂದ 1 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು ಆಗತಾನೇ ಬ್ಯಾಂಕ್ ನಿಂದ ಹೊರ ಬರುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಕಳ್ಳ, ರಸ್ತೆಗೆ 10 ರೂಪಾಯಿ ನೋಟು ಬಿಸಾಕಿ ನಿಮ್ಮ ಹಣ ಬಿದ್ದಿದೆ ಎಂದು ಹೇಳಿದ್ದಾನೆ.
ರಾಘವೇಂದ್ರ ಅವರು 1 ಲಕ್ಷ ರೂಪಾಯಿ ಹಣದ ಬ್ಯಾಗ್ ನ್ನು ಬೈಕ್ ಮೇಲೆ ಇಟ್ಟು 10 ರೂಪಾಯಿ ಎತ್ತಿಕೊಳ್ಳು ಹೋಗಿದ್ದಾರೆ. ಕಳ್ಳ ಕ್ಷಣಾರ್ಧದಲ್ಲಿ 1 ಲಕ್ಷ ರೂಪಾಯಿ ಹಣದ ಬ್ಯಾಗ್ ಎಗರಿಸಿ ಎಸ್ಕೇಪ್ ಆಗಿದ್ದಾನೆ. ರಾಘವೇಂದ್ರ ಅವರಿಗೆ ಯಾರೋ ನಿಮ್ಮ ಬ್ಯಾಗ್ ಕದ್ದೊಯ್ಯುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಎಚ್ಚರಿಸಿದರೂ ಅವರಿಗೆ ಅರ್ಥವಾಗಿಲ್ಲ. ಕಳ್ಳನ ಕೈಚಳಕ ಬ್ಯಾಂಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.