ನಿಮಗಿದು ವಿಚಿತ್ರ ಎಂದು ಎನಿಸಬಹುದು. ಆದರೆ ರಾಜಸ್ಥಾನದ ಹನುಮಾನಗರ ಜಿಲ್ಲೆಯ ಪೊಲೀಸರು ಮಾತ್ರ ನೀರು ಕಳ್ಳಸಾಕಣಿಕೆಯನ್ನ ತಪ್ಪಿಸುವ ಸಲುವಾಗಿ ವಿಶೇಷ ಪೊಲೀಸ್ ಠಾಣೆಯನ್ನೇ ಸ್ಥಾಪನೆ ಮಾಡಿದ್ದಾರೆ.
ಈ ಪ್ರದೇಶದಲ್ಲಿರುವ ಇಂದಿರಾ ಗಾಂಧಿ ಕಾಲುವೆ ಮೂಲಕ ನೀರನ್ನ ಕದಿಯುತ್ತಿರುವವರ ಮೇಲೆ ಕಣ್ಣಿಡುವ ಸಲುವಾಗಿ ರಾಜಸ್ಥಾನ ಸರ್ಕಾರ ಈ ವಿಶಿಷ್ಟ ನಿರ್ಧಾರವನ್ನ ಕೈಗೊಂಡಿದೆ. ಈ ಪ್ರದೇಶದಲ್ಲಿ ಪದೇ ಪದೇ ವರದಿಯಾಗುತ್ತಿರುವ ನೀರುಗಳ್ಳತನದ ಬಗ್ಗೆ ತತ್ಕ್ಷಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ 60 ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗುತ್ತದೆ.
ನೀರುಗಳ್ಳತನವನ್ನ ತಪ್ಪಿಸಲೆಂದೇ ನಿರ್ಮಾಣವಾಗುತ್ತಿರುವ ಈ ಪೊಲೀಸ್ ಠಾಣೆಯಲ್ಲಿ ಓರ್ವ ಸಿಐ, 5 ಸಬ್ ಇನ್ಸ್ಪೆಕ್ಟರ್, 8 ಮಂದಿ ಮುಖ್ಯ ಪೇದೆ ಹಾಗೂ 40 ಮಂದಿ ಪೇದೆ ಇರಲಿದ್ದಾರೆ ಎಂದು ನೋಹಾರ್ನ ಶಾಸಕ ಅಮಿತ್ ಚಾಚನ್ ಮಾಹಿತಿ ನೀಡಿದ್ರು. ಅಲ್ಲದೇ ಪ್ರಭಾವಿ ರೈತರು ತಮ್ಮ ಪ್ರಭಾವ ಬಳಸಿ ನೀರನ್ನ ಪಡೆಯುತ್ತಿದ್ದರೆ ಬಡ ರೈತರು ಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದ್ರು.
ಕಳೆದ ನಾಲ್ಕು ವರ್ಷಗಳಲ್ಲಿ ಹನುಮಾನ್ ನಗರ ಜಿಲ್ಲೆಯೊಂದರಲ್ಲೇ 74 ನೀರುಗಳ್ಳತನದ ಪ್ರಕರಣವು ದಾಖಲಾಗಿದೆ. ಇದರಲ್ಲಿ 28 ಪ್ರಕರಣವು ಭಿರಾನಿ ಠಾಣೆಯೊಂದರಲ್ಲೇ ದಾಖಲಾಗಿದೆ.