
ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆ ಮುಂದುವರೆದಿದೆ. ಬುಧವಾರ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಉಡುಪಿ, ಕೊಡಗು, ಚಾಮರಾಜನಗರ ಜಿಲ್ಲೆಗಳ ವಿವಿಧೆಡೆ ಮಳೆಯಾಗಿದೆ.
ಮಂಗಳೂರು, ಪುತ್ತೂರು, ಸುಳ್ಯ, ಸುರತ್ಕಲ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಸಂಜೆ 5:30 ರಿಂದ ಒಂದು ಗಂಟೆಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಧರ್ಮಸ್ಥಳ ಸುತ್ತಮುತ್ತ ರಾತ್ರಿ 8 ಗಂಟೆಯ ನಂತರ ಮತ್ತೆ ಮಳೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಅನೇಕ ಕಡೆ ಸಂಜೆ ವೇಳೆಗೆ ವರ್ಷದ ಮೊದಲ ಮಳೆಯಾಗಿದೆ. ಚಾಮರಾಜನಗರ, ಬಂಡಿಪುರ ರಾಷ್ಟ್ರೀಯ ಉದ್ಯಾನ, ಗುಂಡ್ಲುಪೇಟೆ ಸುತ್ತಮುತ್ತ ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಮಾರು ಅರ್ಧ ಗಂಟೆ ಕಾಲ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ಪರದಾಡಿದ್ದಾರೆ.
ಹಾಸನ ಜಿಲ್ಲೆಯ ಹಾಸನ, ಆಲೂರು, ಸಕಲೇಶಪುರ, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಬುಧವಾರ ಸಂಜೆ ಮಳೆಯಾಗಿದೆ, ತುಮಕೂರು ಜಿಲ್ಲೆಯ ಕೆಲವೆಡೆ ಮಳೆಯಾದ ವರದಿಯಾಗಿದೆ.