ದೊಡ್ಡ ಹಗರಣಗಳಂತೆ ಸಣ್ಣ ಸಣ್ಣ ಹಗರಣಗಳು ನಡೆಯುತ್ತವೆಯಾದರೂ, ಸುದ್ದಿಯಾಗುವಂಥವು ಕೆಲವು. ಅಂಥದ್ದರಲ್ಲಿ ಇದೂ ಒಂದು. ನಿಂಬೆ ಹಣ್ಣು ಖರೀದಿಯಲ್ಲೂ ಗೋಲ್‌ಮಾಲ್ ಮಾಡಿ ಜೈಲು ಅಧಿಕಾರಿಯೊಬ್ಬರು ಸಿಕ್ಕಿಹಾಕಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಪಂಜಾಬಿನ ಕಪೂರ್ತಲಾ ಮಾಡರ್ನ್ ಜೈಲಿನ ಸೂಪರಿಂಟೆಂಡೆಂಟ್ ಗುರ್ನಾಮ್ ಲಾಲ್ ಈ ಹಗರಣದಲ್ಲಿ ಅಮಾನತುಗೊಂಡಿರುವ ಅಧಿಕಾರಿ. ಕೈದಿಗಳ ಆಹಾರಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಈ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ. 50 ನಿಂಬೆ ಹಣ್ಣು ಖರೀದಿ ಮಾಡಿದ್ದಾಗಿ ರಸೀದಿ ಸಲ್ಲಿಸಿ ಹಣ ನಗದೀಕರಿಸಿದ್ದಾರೆ. ಕಳೆದ ತಿಂಗಳು ನಿಂಬೆಹಣ್ಣು ಬೆಲೆ ಕಿಲೋಗೆ 200 ರೂಪಾಯಿ ಆಗಿದ್ದಾಗ ಅಧಿಕಾರಿ ಈ ಅಕ್ರಮವೆಸಗಿದ್ದರು.
ಜಮ್ಮು-ಕಾಶ್ಮೀರ ಪೊಲೀಸ್ ಮ್ಯಾನ್ ʼರ್ಯಾಪ್ ಸಾಂಗ್ʼ ಗೆ ನೆಟ್ಟಿಗರು ಫುಲ್ ಫಿದಾ
ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಬಂಧೀಖಾನೆ ಇಲಾಖೆ, ಜೈಲಿನ ಲೆಕ್ಕಪತ್ರ ಪರಿಶೀಲಿಸಿತು. ಅಲ್ಲದೆ, ಕೈದಿಗಳ ವಿಚಾರಣೆಯನ್ನು ನಡೆಸಿದಾಗ, ಲಿಂಬೆಹಣ್ಣು ಬಳಕೆಯಾಗದಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಪಂಜಾಬ್ ಜೈಲು, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಜೈಲು ಸೂಪರಿಂಟೆಂಡೆಂಟ್ ಗುರ್ನಾಮ್ ಲಾಲ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ಗುರ್ನಾಮ್ ಲಾಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪ ಕೇಳಿಬಂದ ಕೂಡಲೇ, ಬಂಧೀಖಾನೆ ಎಡಿಜಿಪಿ ವೀರೇಂದ್ರ ಕುಮಾರ್ ಮೇ 1 ರಂದು ಇಬ್ಬರು ಹಿರಿಯ ಅಧಿಕಾರಿಗಳನ್ನು ಹಠಾತ್ ತಪಾಸಣೆಗಾಗಿ ಈ ಜೈಲಿಗೆ ಕಳುಹಿಸಿದರು. ಕೈದಿಗಳಿಗೆ ನೀಡಲಾದ ಆಹಾರವು ಕಳಪೆ ಗುಣಮಟ್ಟ ಮತ್ತು ಅಸಮರ್ಪಕವಾಗಿದೆ ಎಂಬುದನ್ನು ಈ ತಂಡವು ಪತ್ತೆ ಹಚ್ಚಿತ್ತು. ಜೈಲು ದಾಖಲೆಗಳಲ್ಲಿ ತರಕಾರಿ ಖರೀದಿಯ ನಮೂದುಗಳಲ್ಲಿ ಅಕ್ರಮಗಳಿವೆ ಎಂದು ವರದಿ ತಿಳಿಸಿದೆ.