ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, ಅಮೃತಸರ ಪೂರ್ವದಲ್ಲಿ ನವಜೋತ್ ಸಿಂಗ್ ಸಿಧು ಅವರ ವಿರುದ್ಧ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಸ್ಪರ್ಧಿಸಲಿದ್ದಾರೆ.
ಎಸ್.ಎ.ಡಿ. ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಅಮೃತಸರ ಪೂರ್ವ ಕ್ಷೇತ್ರದಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಅಕಾಲಿದಳದ ಅಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಸುಖ್ ಬೀರ್ ಬಾದಲ್ ಅವರ ಸೋದರ ಮಾವ. ಪಂಜಾಬ್ ಚುನಾವಣೆಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಪಂಜಾಬ್ ಅಸೆಂಬ್ಲಿಯು ಒಟ್ಟು 117 ಸ್ಥಾನಗಳನ್ನು ಹೊಂದಿದ್ದು, 59 ಸ್ಥಾನ ಬಹುಮತಕ್ಕೆ ಬೇಕಾಗಿದೆ. 2017 ರ ಪಂಜಾಬ್ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದರೆ, ಆಮ್ ಆದ್ಮಿ ಪಕ್ಷ(ಎಎಪಿ) 20 ಸ್ಥಾನಗಳಲ್ಲಿ ಜಯಿಸಿತ್ತು. ಅಧಿಕಾರದಿಂದ ಹೊರಹಾಕಲ್ಪಟ್ಟ ಶಿರೋಮಣಿ ಅಕಾಲಿ ದಳ(ಎಸ್‌ಎಡಿ) 15 ಸ್ಥಾನಗಳನ್ನು ಗೆದ್ದಿತ್ತು. ಅದರ ಆಗಿನ ಮೈತ್ರಿ ಪಾಲುದಾರ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿತು. ಪ್ರಸ್ತುತ ಪಂಜಾಬ್ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 27, 2022 ರಂದು ಕೊನೆಗೊಳ್ಳುತ್ತದೆ.