alex Certify ಪಂಜಾಬ್ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ‌ ಸಿಎಂ ಸಹೋದರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ‌ ಸಿಎಂ ಸಹೋದರ…!

ಪಂಜಾಬ್ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿವೆ. ಅದ್ರಲ್ಲೂ ಮಾನ್ಸಾ, ಮೊಗಾ, ಮಾಲೌಟ್ ಮತ್ತು ಬಸ್ಸಿ ಪಠಾಣಾ ವಿಧಾನಸಭಾ ಕ್ಷೇತ್ರಗಳಲ್ಲಿ ಅತೃಪ್ತಿ ಎದ್ದುಕಾಣುತ್ತಿದೆ. ಪಂಜಾಬ್ ನ ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸಹೋದರ ಮನೋಹರ್ ಸಿಂಗ್ ಅವರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಟಿಕೆಟ್ ನಿರಾಕರಿಸಲಾಗಿದೆ.

ಖರಾರ್ ಸಿವಿಲ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ ಆಗಿದ್ದ ಮನೋಹರ್, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮನೋಹರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದಿಂದ ಬಸ್ಸಿ ಪಠಾಣಾದಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಬದಲಿಗೆ ಬಸ್ಸಿ ಪಠಾಣಾದ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ ಅವರನ್ನ ಕಾಂಗ್ರೆಸ್ ಕಣಕ್ಕಿಳಿಸಿದೆ. ಇದ್ರಿಂದ ಅಸಮಾಧಾನಗೊಂಡಿರುವ ಮನೋಹರ್ ಸಿಂಗ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಮಾಲೌಟ್ ನ ಹಾಲಿ ಶಾಸಕ ಅಜೈಬ್ ಭಟ್ಟಿ ಸಿಂಗ್ ಹಾಗೂ ಮೊಗಾದಿಂದ ಆಯ್ಕೆಯಾಗಿ ಉಪ ಸ್ಪೀಕರ್ ಸ್ಥಾನದಲ್ಲಿರುವ ಹರ್ಜೋತ್ ಕಮಲ್ ಅವರಿಗೂ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿಲ್ಲ. ಹರ್ಜೋತ್ ಕಮಲ್ ಬದಲಿಗೆ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಮೊಗಾದಿಂದ ಸ್ಪರ್ಧಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಬಟಿಂಡಾ ಗ್ರಾಮಾಂತರದಲ್ಲಿ ಗೆದ್ದು, ಎಎಪಿಯಿಂದ ಕಾಂಗ್ರೆಸ್‌ ಪಕ್ಷ ಸೇರಿದ್ದ ರೂಪಿಂದರ್ ಕೌರ್ ಅವರಿಗೆ ಕಾಂಗ್ರೆಸ್ ಮಾಲೌಟ್ ಕ್ಷೇತ್ರದ ಟಿಕೆಟ್ ನೀಡಿದೆ. ಹೀಗಾಗಿ ಅಜೈಬ್ ಸಿಂಗ್ ಹಾಗೂ ಹರ್ಜೋತ್ ಕಮಲ್ ಬಿಜೆಪಿಗೆ ಹಾರಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದ ವಿವಾದಾತ್ಮಕ ಗಾಯಕ ಸಿದ್ದು ಮುಸ್ಸೆವಾಲಾ ಅವರಿಗೆ ಮಾನ್ಸಾ ಕ್ಷೇತ್ರದ ಟಿಕೆಟ್ ನೀಡಿರುವ ಕಾಂಗ್ರೆಸ್, 2019 ರಲ್ಲಿ ಎಎಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಹಾಲಿ ಶಾಸಕ ನಜರ್ ಸಿಂಗ್ ಮನ್ಶಾಹಿಯಾ ಅವರನ್ನು ಕೈ ಬಿಟ್ಟಿದೆ‌‌.

ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 86 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಚಮ್ಕೌರ್ ಸಾಹಿಬ್‌ನಿಂದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಅಮೃತಸರ ಪೂರ್ವದಿಂದ ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪ್ರತಿನಿಧಿಸುತ್ತಿದ್ದ ಪಟಿಯಾಲ ನಗರ ಕ್ಷೇತ್ರಕ್ಕೆ ಇನ್ನು ಅಭ್ಯರ್ಥಿಯ ಘೋಷಣೆಯಾಗಿಲ್ಲ. 117 ಸದಸ್ಯ ಬಲದ ಅಸೆಂಬ್ಲಿಗೆ, ಉಳಿದ 31 ಸ್ಥಾನಗಳನ್ನು ಕಾಂಗ್ರೆಸ್ ಶೀಘ್ರದಲ್ಲೇ ಘೋಷಿಸಲಿದೆ. ಪಂಜಾಬ್ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ಫೆಬ್ರವರಿ 14 ರಂದು ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...