ಬೆಂಗಳೂರು: ಗಗನಕ್ಕೇರಿದ್ದ ತೊಗರಿ ಬೇಳೆ ದರ ಕಡಿಮೆಯಾಗಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಅಕ್ಟೋಬರ್ ನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಕೆಜಿಗೆ 200 ರೂಪಾಯಿ ದಾಟಿದ್ದ ತೊಗರಿ ಬೇಳೆ ದರ ಈಗ 150 ರಿಂದ 160 ರೂ.ಗೆ ಇಳಿಕೆಯಾಗಿದೆ.
ರಾಜ್ಯದ ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪ್ರಮುಖವಾಗಿ ತೊಗರಿ ಬೆಳೆಯಲಾಗುತ್ತದೆ. ಈ ಬಾರಿ ಮಳೆ, ಬೆಳೆ ಕಡಿಮೆಯಾಗಿದ್ದರೂ ಎಲ್ಲೆಡೆ ಕೊಯ್ಲು ಮಾಡಲಾಗಿದ್ದು, ಹೊಸ ಬೆಳೆ ಬಂದಿರುವುದರಿಂದ ದರ ಕಡಿಮೆಯಾಗಿದೆ.
ಕಳೆದ ಎರಡು ಮೂರು ವಾರಗಳಿಂದ ತೊಗರಿ ಬೇಳೆ ದರ ಕಡಿಮೆಯಾಗತೊಡಗಿದೆ. ಈ ಹಿಂದೆ ತೊಗರಿ ಬೇಳೆ ಜೊತೆಗೆ ಹೆಸರುಕಾಳು, ಅಕ್ಕಿ, ಗೋಧಿ, ಉದ್ದಿನ ಬೇಳೆ ಸೇರಿ ಹಲವು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿತ್ತು. ಇವುಗಳ ಬೆಲೆ ಕೂಡ ಸಹಜ ಸ್ಥಿತಿಯಲ್ಲಿದ್ದು, ಸಗಟು ದರದಲ್ಲಿ ಕೆಜಿಗೆ ಸುಮಾರು 10 ರೂಪಾಯಿವರೆಗೆ ಕಡಿಮೆಯಾಗಿದೆ.