ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತಷ್ಟು ಕುಸಿತವಾಗಿದೆ. ಆಗಸ್ಟ್ 11ರಂದು 4101 ಮೆಗಾ ವ್ಯಾಟ್ ಇದ್ದ ವಿದ್ಯುತ್ ಉತ್ಪಾದನೆ ಆಗಸ್ಟ್ 12ರಂದು 2995 ಮೆಗಾ ವ್ಯಾಟ್ ಗೆ ಕುಸಿತವಾಗಿದೆ. ರಾಜ್ಯದಲ್ಲಿ ವಿದ್ಯುತ್ ಅಭಾವ ಮುಂದುವರೆದಿದೆ.
ಕೇಂದ್ರದ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ಕುಸಿತವಾಗಿದ್ದು, ನಿಗದಿತ ಪ್ರಮಾಣದಲ್ಲಿ ಪೂರೈಕೆ ಇಲ್ಲದ ಕಾರಣ ವಿದ್ಯುತ್ ಪ್ರಭಾವ ಉಂಟಾಗಿದೆ. ಕೆಪಿಟಿಸಿಎಲ್ ನಿಂದ ಎಸ್ಕಾಂ ಗಳಿಗೆ ವಿದ್ಯುತ್ ಮಿತ ಬಳಕೆ ಒತ್ತಡ ಹಾಕಲಾಗಿದೆ. ಇದರ ಪರಿಣಾಮ ವಿದ್ಯುತ್ ಸಮಸ್ಯೆ ನಿವಾರಿಸಲು ಎಸ್ಕಾಂಗಳು ಪರದಾಡುವಂತಾಗಿದೆ.
ಕಠಿಣ ಪರಿಸ್ಥಿತಿ ನಡುವೆ ಭಾನುವಾರ ಎಸ್ಕಾಂಗಳು ವಿದ್ಯುತ್ ಪೂರೈಕೆ ಮಾಡಿದ್ದು, ಕೆಲವು ಕಡೆ ವಿದ್ಯುತ್ ಕಡಿತ ಯಥಾವತ್ತಾಗಿ ಮುಂದುವರೆದಿದೆ. ಮೂರ್ನಾಲ್ಕು ದಿನಗಳಿಂದ ಕೃಷಿ ಪಂಪ್ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿದ್ದ ಎಸ್ಕಾಂಗಳು ಹಲವೆಡೆ ಭಾನುವಾರ ವಿದ್ಯುತ್ ಪೂರೈಕೆ ಮಾಡಿವೆ. ಕೆಲವು ಜಿಲ್ಲೆಗಳಲ್ಲಿ ಅನಿಯಮಿತ ವಿದ್ಯುತ್ ಕಡಿತ ಮುಂದುವರೆದಿದೆ ಎಂದು ಹೇಳಲಾಗಿದೆ.