ಕಡು ಬಡತನದಿಂದ ಕಂಗೆಟ್ಟಿದ್ದ 32 ವರ್ಷದ ಮಹಿಳೆ ತನ್ನ ಮೂರು ದಿನಗಳ ಹಸುಗೂಸನ್ನು 1.78 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಶಿರಡಿ ಪಟ್ಟಣದಲ್ಲಿ ಸಂಭವಿಸಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಂಬಿವಿಲಿ ಪಟ್ಟಣದ ಮಾನ್ಪಾಡಾ ಠಾಣಾ ಪೊಲೀಸರು ಮಹಿಳೆ, ಮಗುವನ್ನು ಖರೀದಿಸಿದ ವ್ಯಕ್ತಿ ಹಾಗೂ ಈ ಅಪರಾಧದಲ್ಲಿ ಮಹಿಳೆಗೆ ಸಹಾಯ ಮಾಡಿದ ಇತರೆ ನಾಲ್ವರನ್ನು ಜೈಲಿಗಟ್ಟಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಮಗುವಿಗೆ ಈ ಮಹಿಳೆ ಜನ್ಮ ನೀಡಿದ್ದಳು. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಮಗುವನ್ನು ಸಾಕುವುದು ಕಷ್ಟ ಎಂದೆನಿಸಿದ ಹಿನ್ನೆಲೆಯಲ್ಲಿ ಈಕೆ ಮಗುವನ್ನು ಮಾರಾಟ ಮಾಡಿದ್ದಾಳೆ. ಆದರೆ ಈ ಪ್ರಕರಣ ಕೆಲ ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿದೆ ಎಂದು ಮನ್ಪಡಾ ಪೊಲೀಸ್ ಠಾಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಗು ಮಾರಾಟಕ್ಕಾಗಿ ಗ್ರಾಹಕರನ್ನು ಹುಡುಕುತ್ತಿದ್ದ ಈಕೆಗೆ ಅಹಮದ್ನಗರ, ಕಲ್ಯಾಣ್ ಹಾಗೂ ಮುಂಬೈನಲ್ಲಿ ವಾಸವಿದ್ದ ಮೂವರು ಮಹಿಳೆಯರು ಸಹಾಯ ಮಾಡಿದ್ದರು ಎನ್ನಲಾಗಿದೆ. ಗ್ರಾಹಕ ಸಿಕ್ಕ ಬಳಿಕ ಯಾವುದೇ ಕಾನೂನು ಕ್ರಮಗಳನ್ನು ಬಳಕೆ ಮಾಡದೆಯೇ ಮಗುವನ್ನು ಮಾರಾಟ ಮಾಡಿದ್ದಾರೆ.