
ಹೌದು, ವರ್ಷದಾರಂಭದಲ್ಲಿ ಬಾಲಕನೊಬ್ಬನ ತಂದೆ ತನ್ನ ಪತ್ನಿಯಿಂದಲೇ ಹತ್ಯೆಗೊಳಗಾಗಿದ್ದರು. ಅವರು ಸಾಯುವ ಮುನ್ನ ರೆಮಿ ರೂಗೆ ನಾಯಿಯನ್ನು ಉಡುಗೊರೆಯಾಗಿ ಕೊಡುವುದಾಗಿ ಹೇಳಿದ್ದರು. ಆದರೆ ಶ್ವಾನವನ್ನು ಗಿಫ್ಟ್ ಆಗಿ ತನ್ನ ಪುತ್ರನಿಗೆ ಕೊಡುವ ಮುನ್ನವೇ ಅವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ತಂದೆಯ ಸಾವಿನಿಂದ ರೆಮಿ ಕಂಗಾಲಾಗಿ ಹೋಗಿದ್ದ. ಇನ್ನು ಈ ವಿಷಯ ತಿಳಿದ ಕ್ವೀನ್ಸ್ ಲ್ಯಾಂಡ್ ನ ಪೊಲೀಸ್ ಅಧಿಕಾರಿಗಳು ಕಾಪರ್ ಎಂಬ ಲ್ಯಾಬ್ರಡಾರ್ ನಾಯಿಮರಿಯನ್ನು ದತ್ತು ಪಡೆದು ರೆಮಿಗೆ ಉಡುಗೊರೆಯಾಗಿ ಒಪ್ಪಿಸಿದ್ದಾರೆ.
ಸ್ವಾಭಾವಿಕವಾಗಿ ರೆಮಿ ನಾಯಿ ಮರಿಯನ್ನು ನೋಡಿದ ನಂತರ ಹಾಗೂ ಅದಿನ್ನು ನಿನ್ನದೇ ಅಂತಾ ಪೊಲೀಸ್ ಅಧಿಕಾರಿ ಹೇಳಿದಾಗ, ರೆಮಿ ಸಂತೋಷದಿಂದ ಕುಣಿದಾಡಿದ್ದಾನೆ.
ಬಾಲಕನ ದುಃಖವನ್ನು ನೋಡಲಾಗದೆ, ಆತನಿಗಾಗಿ ಏನಾದರೂ ಮಾಡಬೇಕೆಂದು ಪೊಲೀಸರು ಅಂದುಕೊಂಡಿದ್ದರಂತೆ. ನೀಲಿ ಸೂಟ್ ಧರಿಸಿರುವ ಪೊಲೀಸರು ಕೂಡ ಮನುಷ್ಯರೇ ತಾನೇ ಎಂದಿರುವ ಪೇದೆ ಕರೆನ್ ಎಡ್ವರ್ಡ್, ಪೊಲೀಸ್ ಇಲಾಖೆಯೇ ಬಾಲಕನಿಗೆ ಉಡುಗೊರೆ ನೀಡಲು ಮುಂದೆ ಬಂದಿದ್ದಾಗಿ ಹೇಳಿದ್ದಾರೆ.
ಇಷ್ಟೇ ಅಲ್ಲ ನಿಧಿಯನ್ನು ಕೂಡ ಸಂಗ್ರಹಿಸಲಾಗುತ್ತಿದೆ. ಇದಕ್ಕೆಂದೇ ಕ್ವೀನ್ಸ್ಲ್ಯಾಂಡ್ ಪೊಲೀಸ್ ಸೇವೆಯ ಸ್ಟಾಫರ್ಡ್ ವಿಭಾಗವು ಗೋಫೌಂಡ್ ಮಿ ಎಂಬ ಪುಟವನ್ನು ತೆರೆದಿದ್ದು, ಈಗಾಗಲೇ 6000 ಡಾಲರ್ ಗುರಿಯನ್ನು ದಾಟಿದೆ.