ದುಬೈ ಎಕ್ಸ್ಪೋ 2020ರಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ 2022ರ ಆರಂಭದಲ್ಲಿ ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಂದಹಾಗೆ ಇದು ಹೊಸ ವರ್ಷದಲ್ಲಿ ಪ್ರಧಾನಿ ಮೋದಿ ಮೊದಲ ವಿದೇಶ ಭೇಟಿ ಎನಿಸಿಕೊಳ್ಳಲಿದೆ.
ಭಾರತ ಹಾಗೂ ಅರಬ್ ರಾಷ್ಟ್ರಗಳ ನಡುವಿನ ವ್ಯಾಪಾರ ಹಾಗೂ ವ್ಯವಹಾರಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ಮೋದಿ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ದುಬೈ ಎಕ್ಸ್ಪೋ 2020ಯನ್ನು ಹೊರತುಪಡಿಸಿ ಪ್ರಧಾನಿ ಮೋದಿ ಯುಎಇ ನಾಯಕರ ಜೊತೆಯಲ್ಲಿ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಲಿದ್ದಾರೆ.
ಇಂಡಿಯಾ ಪೆವಿಲಿಯನ್ನಲ್ಲಿ ಭಾರತದ ಹಿಂದಿನ, ಪ್ರಸ್ತುತ ಹಾಗೂ ಭವಿಷ್ಯದ 360 ಡಿಗ್ರಿ ಡಿಜಿಟಲ್ ರಿಕ್ರಿಯೇಷನ್ನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಉದ್ಘಾಟಿಸಿದ್ರು.
ವಿದೇಶಾಂಗ ಸಚಿವ ಎಸ್. ಜೈಶಂಕರ್, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮುರುಳೀಧರನ್ ಸೇರಿದಂತೆ ವಿವಿಧ ನಾಯಕರು ಎಕ್ಸ್ಪೋಗೆ ಭೇಟಿ ನೀಡಿದ್ದಾರೆ.