ಪ್ರಧಾನಿ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ, ಪ್ರಿಯಾಂಕ ಚೋಪ್ರಾ, ಅಕ್ಷಯ್ ಕುಮಾರ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಬಿಹಾರದ ರಾಜ್ಯ ಆರೋಗ್ಯ ಇಲಾಖೆ ಸಲ್ಲಿಸಿರುವ ಅಂಕಿ ಅಂಶಗಳನ್ನು ನೀವು ನಂಬೋದೇ ಆದರೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಷ್ಟೇ ಏಕೆ ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಇಲ್ಲಿ ಅರ್ವಾಲ್ ಜಿಲ್ಲೆಯ ಸಮುದಾಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾರಂತೆ..!
ಅಕ್ಟೋಬರ್ 27ರಂದು ಬಿಹಾರದ ಅರ್ವಾಲ್ ಜಿಲ್ಲೆಯ ಕರ್ಪಿ ಬ್ಲಾಕ್ನ ಕೋವಿಡ್ ಪರೀಕ್ಷಾ ವರದಿಯಲ್ಲಿ ಇಂತದ್ದೊಂದು ಅಕ್ರಮ ಬೆಳಕಿಗೆ ಬಂದಿದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ವ್ಯಕ್ತಿಯ ಹೆಸರಿನ ಜಾಗದಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ದೇಶದ ವಿವಿಧ ಗಣ್ಯರ ಹೆಸರುಗಳನ್ನು ನಮೂದಿಸಲಾಗಿದೆ. ಅಂದಹಾಗೆ ಈ ಹೆಸರಿನ ಯಾವುದೇ ವ್ಯಕ್ತಿಗಳು ಈ ಗ್ರಾಮದಲ್ಲಿಲ್ಲ. ಅಲ್ಲದೇ ಈ ಎಲ್ಲಾ ಗಣ್ಯರ ವಿಳಾಸವನ್ನು ಅರ್ವಾಲ್ ಜಿಲ್ಲೆ ಎಂದೇ ನಮೂದಿಸಲಾಗಿದೆ.
ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರನ್ನು ಮೂರು ಬಾರಿ ನಮೂದಿಸಲಾಗಿದೆ. ಪ್ರಧಾನಿ ಮೋದಿಯನ್ನು ಪುರನ್ ಗ್ರಾಮದ ನಿವಾಸಿ ಎಂದು ಉಲ್ಲೇಖಿಸಲಾಗಿದೆ. ಅಮಿತ್ ಶಾ ಹೆಸರು ಎರಡು ಬಾರಿ ನಮೂದಾಗಿದೆ. ಅಕ್ಷಯ್ ಕುಮಾರ್ ಹೆಸರು ನಾಲ್ಕು ಬಾರಿ, ಪ್ರಿಯಾಂಕಾ ಚೋಪ್ರಾ ಹೆಸರನ್ನು ಬರೋಬ್ಬರಿ 6 ಬಾರಿ ಬರೆಯಲಾಗಿದೆ. ಇವರೆಲ್ಲರ ಸ್ವ್ಯಾಬ್ ಪರೀಕ್ಷೆಯನ್ನು ಅಕ್ಟೋಬರ್ 27ರಂದು ಮಾಡಲಾಗಿದೆ. ಹಾಗೂ ಇವರೆಲ್ಲರ ಪರೀಕ್ಷಾ ವರದಿ ನೆಗೆಟಿವ್ ಎಂದು ಬರೆಯಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಾಜ್ಯ ಆರೋಗ್ಯ ಇಲಾಖೆ ಮುಖ್ಯ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್, ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಬ್ಬರು ಡೇಟಾ ಆಪರೇಟರ್ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ ಎಂದು ಹೇಳಿದ್ದಾರೆ.