ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್ ತಲುಪಿದ್ದು ಕೇದಾರನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಯಲ್ಲಿ 35 ಟನ್ ತೂಕದ ಆದಿಗುರು ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ರು. ಆದಿಗುರು ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ ಕೆಲಸವು 2019ರಿಂದಲೇ ಆರಂಭವಾಗಿತ್ತು. ಪ್ರಧಾನಿಯಾದ ಬಳಿಕ ಕೇದಾರನಾಥ್ಗೆ ಐದನೇ ಬಾರಿಗೆ ಭೇಟಿ ನೀಡಿದಂತಾಗಿದೆ.
ಮುಂಜಾನೆಯೇ ಡೆಹ್ರಾಡೂನ್ ತಲುಪಿದ ಪ್ರಧಾನಿ ಮೋದಿಯನ್ನು ಉತ್ತರಾಖಂಡ್ ರಾಜ್ಯಪಾಲ ಗುರುಮಿತ್ ಸಿಂಗ್ ಹಾಗೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಸ್ವಾಗತಿಸಿದರು.
ಇಂದು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ, ಈ ಪೈಕಿ ಗಂಗಾನದಿಯ ಉಪನದಿಯಾದ ಮಂದಾಕಿನಿಯಲ್ಲಿ 2013ರ ಜಲಪ್ರಳಯದಲ್ಲಿ ಹಾನಿಗೊಳಗಾಗಿದ್ದ ಶಂಕರಾಚಾರ್ಯರ ಸಮಾಧಿಯನ್ನು ಪುನರ್ ನಿರ್ಮಾಣ ಮಾಡಲಾಗಿದ್ದು ಈ ಸಮಾಧಿಯನ್ನೂ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 8ನೇ ಶತಮಾನದ ದಾರ್ಶನಿಕರಾಗಿದ್ದ ಆದಿ ಗುರು ಶಂಕರಾಚಾರ್ಯರು ಕೇದಾರನಾಥದಲ್ಲಿ ಮೋಕ್ಷವನ್ನು ಪಡೆದಿದ್ದರು.
ಇನ್ನು ಇದರ ಜೊತೆಯಲ್ಲಿ ಕೇದಾಪುರಿ ಮರು ನಿರ್ಣಾಮ ಯೋಜನೆ ಸೇರಿದಂತೆ ಇನ್ನಿತರ ಅನೇಕ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಗಳು 12 ಜ್ಯೋರ್ತಿಲಿಂಗಗಳು, 4 ಶಂಕರಾಚಾರ್ಯ ಮಠಗಳು ಹಾಗೂ ದೇಶದ ಇತರೆ ದೇವಾಲಯಗಳಲ್ಲಿ ನೇರಪ್ರಸಾರ ಕಾಣಲಿದೆ.