ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಅಯೋಧ್ಯೆಯಲ್ಲಿ 10 ದಿನಗಳ ದೀಪಾವಳಿ ಆಚರಣೆಯನ್ನು ಉದ್ಘಾಟನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಜೃಂಭಣೆಯ ದೀಪೋತ್ಸವಕ್ಕೆ ಸಾಮಾನ್ಯವಾಗಿ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡುತ್ತಿದ್ದರು. ಇದು ಯೋಗಿ ಸರ್ಕಾರದ 5 ವರ್ಷದ ಆಡಳಿತದ ಅವಧಿಯ ಕೊನೆಯ ವರ್ಷವಾಗಿದೆ.
ನವೆಂಬರ್ 3ರಂದು ನಡೆಯಲಿರುವ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಅಯೋಧ್ಯಾ ಅಭಿವೃದ್ಧಿ ಇಲಾಖೆ ಸೂಕ್ತ ತಯಾರಿ ಆರಂಭಿಸಿದೆ. ಈ ಬಾರಿ 6.5 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನೆಸ್ ದಾಖಲೆ ರಚಿಸಲು ಪ್ಲಾನ್ ಕೂಡ ಮಾಡಲಾಗಿದೆ.
ಪ್ರಧಾನಿ ಮೋದಿಯವರನ್ನು ಮತ್ತೆ ಅಯೋಧ್ಯೆಯಲ್ಲಿ ನೋಡಲು ಸಾಧ್ಯವಾದರೆ ನಾವೇ ಭಾಗ್ಯಶಾಲಿಗಳು ಎನಿಸಿಕೊಳ್ಳುತ್ತೇವೆ ಎಂದು ಅಯೋಧ್ಯೆ ದೀಪೋತ್ಸವ ತಯಾರಿಯ ಜವಾಬ್ದಾರಿ ವಹಿಸಿರುವ ವಿಶಾಲ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ವಿಶಾಲ್ ಸಿಂಗ್ ಹೇಳಿದ್ದಾರೆ. ಅವರು ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ.