ಹೆಚ್ಚುತ್ತಿರುವ ಇಂಧನ ದರ ಹಾಗೂ ಗಡಿ ಪ್ರದೇಶಗಳಲ್ಲಿ ಚೀನಾ ಬೆಳೆಯುತ್ತಿರುವುದು ಈ ಎರಡೂ ವಿಚಾರಗಳಲ್ಲಿ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ಹೈದರಾಬಾದ್ನಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
ಪಾಕಿಸ್ತಾನ ಏನಾದರೂ ಮಾಡಿದ್ದರೆ ಪ್ರಧಾನಿ ಮೋದಿ ಎಲ್ಲರಿಗಿಂತ ಮೊದಲು ಹೇಳಿಕೆ ನೀಡುತ್ತಿದ್ದರು. ಆದರೆ ಚೀನಾ ವಿಚಾರದಲ್ಲಿ ಮಾತ್ರ ಒಂದೇ ಒಂದು ಶಬ್ದವೂ ಪ್ರಧಾನಿ ಬಾಯಿಯಿಂದ ಹೊರ ಬಂದಿಲ್ಲ ಎಂದು ಜರಿದಿದ್ದಾರೆ.
ಪಾಕ್ ಪುಲ್ವಾಮಾ ದಾಳಿ ನಡೆಸಿದ್ದ ವೇಳೆ ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರ ದೇಶದ ಒಳಗೆ ಎಂಟ್ರಿ ಕೊಡುವ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಆದರೆ ಇದೀಗ ಚೀನಾ ಅರುಣಾಚಲ ಪ್ರದೇಶ ಹಾಗೂ ಉತ್ತರಾಖಂಡ್ ಪ್ರವೇಶಿಸಿದೆ. ಆದರೆ ಮೋದಿ ಮಾತ್ರ ಈ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ. ಪ್ರಧಾನಿಗೆ ಚೀನಾದ ಬಗ್ಗೆ ಮಾತನಾಡಲು ಭಯವಿದೆ ಎಂದು ಹೇಳಿದ್ರು.
ಪಾಕಿಸ್ತಾನದ ಜೊತೆ ಟಿ 20 ಪಂದ್ಯವನ್ನಾಡಲು ಟೀಂ ಇಂಡಿಯಾಗೆ ಅನುಮತಿ ನೀಡಿದ ವಿಚಾರವಾಗಿಯೂ ಓವೈಸಿ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಶ್ಮೀರದಲ್ಲಿ ಇಸ್ಲಾಮಾಬಾದ್ ಜನತೆ ಜೀವದೊಂದಿಗೆ ಟಿ 20 ಪಂದ್ಯವನ್ನು ಮುಂದುವರಿಸಿದೆ. ನಮ್ಮ ಯೋಧರು ಜಮ್ಮು ಕಾಶ್ಮೀರದಲ್ಲಿ ಸಾಯುತ್ತಿದ್ದರೆ, ನಾವು ಪಾಕ್ ಜೊತೆ ಟಿ 20 ಪಂದ್ಯವಾಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ರು.