ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ಗಳ ಬಳಿಕ ಮನೋಜ್ ಬಾಜಪೇಯಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್ ಸೀಸನ್ 1 ಹಾಗೂ ಸೀಸನ್ 2 ಮೂಲಕ ಖ್ಯಾತಿ ಗಳಿಸಿದ ಮನೋಜ್ರನ್ನು ಒಟಿಟಿ ವೇದಿಕೆಯ ಸೂಪರ್ ಸ್ಟಾರ್ ಎಂದೇ ಬಿರುದು ನೀಡಲಾಗಿದೆ.
ಆದರೆ ಈ ಖ್ಯಾತಿಯನ್ನು ಮನೋಜ್ ತಿರಸ್ಕರಿಸಿದ್ದಾರೆ. ನನ್ನನ್ನು ಸ್ಟಾರ್ ಅಥವಾ ಸೂಪರ್ ಸ್ಟಾರ್ ಎಂದು ಕರೆಯುವುದು ನನಗೆ ಮುಜುಗರ ಉಂಟುಮಾಡುತ್ತಿದೆ. ಈ ಬಿರುದನ್ನು ದಯಮಾಡಿ ಬೇರೆ ಯಾರಿಗಾದರೂ ನೀಡಿ. ಇಂತಹ ಬಿರುದುಗಳಿಗೆ ನಾನು ಯೋಗ್ಯ ಎಂದು ನನಗನಿಸುತ್ತಿಲ್ಲ. ಕೆಲಸದ ಮೇಲೆ ನಂಬಿಕೆ ಇಟ್ಟು ಮುಂದುವರಿಯುವವನು ನಾನು. ಈ ಬಿರುದುಗಳಿಂದ ನನಗೆ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.
ವೃತ್ತಿ ಜೀವನದ ಏರಿಳಿತಳಿಗೆ ತಲೆ ಕೆಡಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಯಶಸ್ಸಿನ ಸೊಕ್ಕನ್ನು ಮೈಗೇರಿಸಿಕೊಂಡವನಲ್ಲ. ವೈಫಲ್ಯ ಉಂಟಾದಾಗ ಕುಗ್ಗಿದವನೂ ನಾನಲ್ಲ. ಹಣ ಗಳಿಸಲು ಅಥವಾ ಪ್ರಶಸ್ತಿ ಗೆಲ್ಲಲು ನಾನು ಈ ವೃತ್ತಿರಂಗಕ್ಕೆ ಬಂದಿಲ್ಲ. ನಾನು ನಟನೆಯನ್ನು ಪ್ರೀತಿಸುತ್ತಿದ್ದೇನೆ. ಇದೇ ಕಾರಣಕ್ಕೆ ನಾನು ಇಲ್ಲಿದ್ದೇನೆ ಎಂದು ಹೇಳಿದ್ರು.
ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುವುದರಲ್ಲಿ ನನಗೆ ಆಸಕ್ತಿ ಹೆಚ್ಚಿದೆ. ಸಿನಿಮಾಗಳು ಚೆನ್ನಾಗಿ ಓಡಿದರೆ ಅದರಲ್ಲಿ ಖಂಡಿತವಾಗಿಯೂ ಲಾಭವಿದೆ. ಈ ಮಾತನ್ನು ನಾನು ನಿರಾಕರಿಸುವುದಿಲ್ಲ. ಅಥವಾ ಹಣಕ್ಕೆ ಯಾವುದೇ ಮಹತ್ವವಿಲ್ಲ ಎಂದೂ ನಾನು ಹೇಳುವುದಿಲ್ಲ. ಆದರೆ ಈ ರೀತಿಯ ಬಿರುದುಗಳು ನಿಜಕ್ಕೂ ನನಗೆ ಮುಜುಗರ ತರಿಸುತ್ತದೆ ಎಂದು ಹೇಳಿದ್ದಾರೆ.