ಅನಾರೋಗ್ಯದ ನೆವ ಹೇಳಿ ರಜೆ ಕೇಳುವುದು ಬಹುತೇಕ ಉದ್ಯೋಗಿಗಳಲ್ಲಿ ಕಂಡು ಬರುವ ಚಾಳಿ. ಇದೀಗ ಈ ಪರಿಪಾಠಕ್ಕೆ ಅಂತ್ಯ ಹಾಡಬಲ್ಲ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶವೊಂದನ್ನು ಸೂರತ್‌ನ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಹಾಗೂ ಜರ್ಮನಿಯ ರ‍್ಹೇನಿಶ್ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್‌ನ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಶೀತ ಹಾಗೂ ಜ್ವರದ ನೆವ ಹೇಳಿಕೊಂಡು ರಜೆ ಕೇಳಬಹುದಾದ ಸಾಧ್ಯತೆಗಾಗಿ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಸಾಮಾನ್ಯವಾಗಿ ಶೀತ ಹಾಗೂ ಜ್ವರ ಬಂದಾಗ ನಮ್ಮ ದನಿಯಲ್ಲಿ ಆಗುವ ಬದಲಾವಣೆಯನ್ನು ಗ್ರಹಿಸಿ, ಅನಾರೋಗ್ಯದ ಸತ್ಯಾಸತ್ಯತೆಯನ್ನು ಈ ತಂತ್ರಾಂಶದ ಮುಖೇನ ಕಂಡುಕೊಳ್ಳಬಹುದಾಗಿದೆ.
ಶೀತ ಹಾಗೂ ಸಾಮಾನ್ಯ ಸ್ಥಿತಿಯಲ್ಲಿರುವ ವ್ಯಕ್ತಿಯ ದನಿಯಲ್ಲಿ ಆಗುವ ಬದಲಾವಣೆಯನ್ನು ಗ್ರಹಿಸುವಲ್ಲಿ 65%ನಷ್ಟು ನಿಖರತೆಯನ್ನು ತೋರಿರುವ ಈ ತಂತ್ರಾಶಕ್ಕೆ ಇನ್ನಷ್ಟು ಸುಧಾರಣೆಗಳನ್ನು ಮಾಡಲಾಗುತ್ತಿದೆ.
ಇದರೊಂದಿಗೆ ಶೀತ, ಕೆಮ್ಮು ಹಾಗೂ ಜ್ವರಗಳಂಥ ಸಮಸ್ಯೆಗಳಿರುವ ರೋಗಿಗಳನ್ನು ಸುಲಭವಾಗಿ ಪತ್ತೆ ಮಾಡುವ ಮೂಲಕ ಅವರಿಂದ ಅನ್ಯರಿಗೆ ಸೋಂಕು ಹಬ್ಬದಂತೆ ನೋಡಿಕೊಳ್ಳಲು ವೈದ್ಯರಿಗೆ ಅನುವಾಗಲಿದೆ ಎಂದು ತಿಳಿಸಲಾಗಿದೆ.
ಈ ತಂತ್ರಾಂಶದಿಂದಾಗಿ ರೋಗಿಗಳನ್ನು ಆಸ್ಪತ್ರೆಗೆ ಕರೆದು ಶುಶ್ರೂಷೆ ಮಾಡುವುದಕ್ಕಿಂತ, ಅವರ ದನಿಯಲ್ಲಿನ ಏರಿಳಿಕೆಗಳನ್ನು ಗ್ರಹಿಸಿ ಸೂಕ್ತವಾದ ವೈದ್ಯೋಪಚಾರದ ಸಲಹೆಗಳನ್ನು ನೀಡಬಹುದಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.