ಲಖನೌ: “ಭಾಜಪಾದ ಕಾರ್ಯಕರ್ತರು ಈ ಪೊಲೀಸ್ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ” – ಹೀಗೊಂದು ಬರಹವಿರುವ ಬ್ಯಾನರ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಜನಪದ ಮೇರಠ್ ಪೊಲೀಸ್ ಠಾಣೆಯ ಕಾಂಪೌಂಡ್ನಲ್ಲಿ ಈ ಬ್ಯಾನರ್ ಕಾಣಿಸಿಕೊಂಡಿದೆ. “ಬಿಜೆಪಿ ಕಾರ್ಯಕರ್ತಾವೋಂ ಕಾ ಥಾನೆ ಮೈ ಆನಾ ಮನ ಹೈ” (ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ) ಎಂಬ ಒಕ್ಕಣೆ ಅದರಲ್ಲಿದೆ. ಅದರ ಕೆಳಗೆ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ಎಚ್ಒ) ಹೆಸರನ್ನೂ ಬರೆಯಲಾಗಿದೆ.
ವೈಫೈ ಇಲ್ಲದೆ ಪರಸ್ಪರ ಮಾತನಾಡಲೆಂದೇ ಇರುವ ಕೆಫೆ ಇದು…!
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಚಿತ್ರವನ್ನು ಹಂಚಿಕೊಂಡು, “ಐದು-ಆರು ವರ್ಷಗಳಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ, ಆಡಳಿತ ಪಕ್ಷದ ಜನರು ಪೊಲೀಸ್ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇದು ರಾಜ್ಯದ ಬಿಜೆಪಿ ಸರ್ಕಾರದ ಸ್ಥಿತಿ” ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಠಾಣೆಯ ಹಿರಿಯ ಪೊಲೀಸ್ ಅಧೀಕ್ಷಕ ಪ್ರಭಾಕರ ಚೌಧರಿ, “ಮಧ್ಯಾಹ್ನ ಕೆಲವು ಅಪರಿಚಿತ ವ್ಯಕ್ತಿಗಳು ಬ್ಯಾನರ್ ಅನ್ನು ಹಾಕಿದ್ದಾರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಕೆಲವರನ್ನು ಗುರುತಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಬ್ಯಾನರ್ ಹಾಕುವ ಕೆಲವು ನಿಮಿಷಗಳ ಮೊದಲು, ಎರಡು ಗುಂಪುಗಳು ಕೆಲವು ಹಳೆಯ ಆಸ್ತಿ ವಿವಾದದ ಬಗ್ಗೆ ಪೊಲೀಸ್ ಠಾಣೆಗೆ ಬಂದಿದ್ದವು. ಅವರಲ್ಲಿ ಯಾರೋ ಬ್ಯಾನರ್ ಹಾಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿ ಶಂಕೆ ವ್ಯಕ್ತಪಡಿಸಿದರು.