ಸ್ವಚ್ಛತಾ ದಿನದ ಅಂಗವಾಗಿ ಹೆಚ್ಚೆಂದರೆ ನಮ್ಮ ದೇಶದಲ್ಲಿ ಮನೆ ಎದುರಿನ ರಸ್ತೆಗಳು, ಚರಂಡಿಗಳು, ತ್ಯಾಜ್ಯಗಳನ್ನು ಬಿಸಾಡಿದ ಸ್ಥಳಗಳು, ಸಮುದ್ರ-ನದಿ ದಂಡೆಗಳನ್ನು ಶುದ್ಧಗೊಳಿಸುವ ಅಭಿಯಾನಗಳನ್ನು ನೀವು ನೋಡಿರುತ್ತೀರಿ, ಕೇಳಿರುತ್ತೀರಿ.
ಆದರೆ, ಫಿಲಿಪ್ಪೀನ್ಸ್‌ನ ಡೈವರ್ಸ್‌ಗಳು ತಮ್ಮ ಪ್ರವೃತ್ತಿಯನ್ನು ಚೆನ್ನಾಗಿ ಬಳಸಿಕೊಂಡು ಕಡಲಾಳಕ್ಕೆ ಇಳಿದು ಪ್ಲಾಸ್ಟಿಕ್ ಬ್ಯಾಗ್, ಡ್ರಿಂಕ್ಸ್ ಬಾಟಲ್‌ಗಳನ್ನು ಹುಡುಕಿ ಎತ್ತುಕೊಂಡು ಬಂದಿದ್ದಾರೆ. ಇವರದ್ದು ಸಮುದ್ರದ ಒಡಲ ಸ್ವಚ್ಛಗೊಳಿಸುವಿಕೆ ಕಾರ್ಯವಾಗಿದೆ!
ಹೌದು, ಸುಮಾರು 7,500 ದ್ವೀಪಗಳ ಸಮೂಹವಾಗಿರುವ ಫಿಲಿಪ್ಪೀನ್ಸ್‌ಗೆ ಕರಾವಳಿಯೇ ಪ್ರಮುಖ ಜೀವಾಳ. ಇದು ಪ್ರವಾಸಿಗರ ಸ್ವರ್ಗ ಕೂಡ ಹೌದು. ಇದರ ಪರಿಣಾಮವಾಗಿ ಪ್ರವಾಸಿಗರಿಂದ ಬಿಸಾಡಲ್ಪಡುವ ತ್ಯಾಜ್ಯಗಳು ಕಡಲ ಆಳಕ್ಕೆ ಇಳಿದು, ಸಾಗರ ಜೀವಿಗಳ ಪ್ರಾಣಕ್ಕೆ ಸಂಚಕಾರ ಆಗುತ್ತಿವೆ.
ಈ ಬಗ್ಗೆ ಸ್ಥಳೀಯ ಆಡಳಿತ ಎಚ್ಚರಿಸಿದರೂ ಪರಿಣಾಮ ಕಾಣುತ್ತಿಲ್ಲ. ಹಾಗಾಗಿ ಜಾಗತಿಕ ಸ್ವಚ್ಛಗೊಳಿಸುವಿಕೆ ದಿನದ ನೆಪ ಮಾಡಿಕೊಂಡ ಕಾರ್ಮೆಲಾ ಸೆವಿಲ್ಲಾ ಎಂಬ ಸ್ವಯಂಸೇವಕಿಯೊಬ್ಬರು ತಮ್ಮಂತೆ ಡೈವಿಂಗ್ ನಿಪುಣರ ತಂಡ ರಚಿಸಿಕೊಂಡಿದ್ದಾರೆ.
BIG NEWS: ಆತ್ಮಹತ್ಯೆಗೆ ಶರಣಾದ 4 ತಿಂಗಳ ಗರ್ಭಿಣಿ; ಬಂಧನವಾಗುತ್ತಿದ್ದಂತೆ ಗಂಡನ ಒಂದೊಂದೇ ಅಸಲಿ ಮುಖ ಬಯಲು
ಅವರೆಲ್ಲರಿಗೂ ಸಾಗರದಾಳಕ್ಕೆ ಒಂದು ಪ್ಲಾಸ್ಟಿಕ್ ಚೀಲವನ್ನು ಕೊಟ್ಟು ಇಳಿಸಿದ್ದಾರೆ. ಅಲ್ಲಿ ಸಿಕ್ಕ ಬಾಟಲಿಗಳು, ಪ್ಲಾಸ್ಟಿಕ್ ವಸ್ತುಗಳು, ಲೋಹದ ವಸ್ತುಗಳು, ರಾಸಾಯನಿಕಗಳ ಡಬ್ಬಗಳನ್ನು ಆದಷ್ಟು ಪ್ರಮಾಣದಲ್ಲಿ ಕಡಲತೀರಕ್ಕೆ ಎಳೆದು ತರುವಂತೆ ಟಾಸ್ಕ್ ಕೊಟ್ಟಿದ್ದಾರೆ.
ನೂರಾರು ಕಿಲೋಗ್ರಾಮ್‌ನಷ್ಟು ತ್ಯಾಜ್ಯ ಸಾಗರದ ಆಳದಿಂದ ತೆರವಾಗಿ ದಡ ಸೇರಿದ್ದು, ಸಂಸ್ಕರಣಾ ಘಟಕಕ್ಕೆ ತಲುಪಿಸಲಾಗಿದೆ. ಸದ್ಯ ಅಂತಾರಾಷ್ಟ್ರೀಯ ಮಟ್ಟದ ಡೈವರ್‌ಗಳ ತಂಡವೊಂದು ಕಾರ್ಮೆಲಾ ಜತೆಗೆ ಕೈಜೋಡಿಸಲು ಮುಂದಾಗಿರುವುದು ಸಂತಸದ ಸಂಗತಿ.
ವಿಶ್ವಾದ್ಯಂತ ಹರಡಿರುವ ಸಾಗರಕ್ಕೆ ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪೈಕಿ ಶೇ.81ರಷ್ಟು ಪ್ರಮಾಣದ ತ್ಯಾಜ್ಯವು ಏಷ್ಯಾ ಖಂಡದಿಂದ ಬರುತ್ತಿದೆಯಂತೆ…!