ಸಾಕು ಪ್ರಾಣಿಗಳನ್ನು ಸಾಕೋದು ಅಂದರೆ ಬಹುತೇಕ ಎಲ್ಲರಿಗೂ ಇಷ್ಟವಾದ ಕೆಲಸವೇ. ಆದರೆ ರಾಜ್ಯ ರಾಜಧಾನಿ ಬೆಂಗಳೂರು ಮಂದಿ ಮಾತ್ರ ಸಾಕು ಪ್ರಾಣಿಗಳನ್ನು ಸಾಕಬೇಕು ಅಂದರೆ ಬಿಬಿಎಂಪಿ ಅನುಮತಿ ಪಡೆಯಬೇಕು. ನಿಯಮಗಳನ್ನು ರೂಪಿಸಿದ ಬಳಿಕ ನೋಂದಣಿಗೆ 6 ತಿಂಗಳು ಕಾಲಾವಕಾಶ ನೀಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಕಡ್ಡಾಯವಾಗಿರದ ಸಾಕು ಪ್ರಾಣಿಗಳ ನೋಂದಣಿ ಪ್ರಕ್ರಿಯೆಯು ಇನ್ಮುಂದೆ ಕಡ್ಡಾಯವಾಗಲಿದೆ. ಈ ಪರವಾನಿಗೆಯ ಮೂಲಕ ಸಾಕು ಪ್ರಾಣಿಗಳು ಹಾಗೂ ಮಾಲೀಕರನ್ನು ಗುರುತು ಹಿಡಿಯುವುದು ಸುಲಭವಾಗಲಿದೆ. ಅಲ್ಲದೇ ಕಾನೂನು ಬಾಹಿರ ಸಂತಾನೋತ್ಪತ್ತಿ ಹಾಗೂ ಪ್ರಾಣಿಗಳನ್ನು ಎಲ್ಲಂದರಲ್ಲಿ ಬಿಡುವುದನ್ನು ತಡೆಯಬಹುದಾಗಿದೆ.
ಕಷ್ಟದಲ್ಲಿದ್ದರೂ ಅಪರಿಚಿತನ ಸಹಾಯಕ್ಕೆಮುಂದಾದ ಮಹಿಳೆ…! ಭಾವುಕರನ್ನಾಗಿಸುತ್ತೆ ಈ ವಿಡಿಯೋ
ಸಾಕು ಪ್ರಾಣಿಗಳನ್ನು ಸಾಕುವುದು ಈಗೀಗ ಟ್ರೆಂಡ್ ಆಗಿಬಿಟ್ಟಿದೆ. ಇದನ್ನು ಜವಾಬ್ದಾರಿ ಎಂದುಕೊಳ್ಳುವವರ ಸಂಖ್ಯೆ ಕಡಿಮೆಯೇ ಆಗಿದೆ. ಆದರೆ ಈ ಪರವಾನಿಗೆಯು ಜನರಲ್ಲಿ ಇರುವ ಈ ಭಾವನೆಯನ್ನು ಬದಲಾಯಿಸುತ್ತದೆ ಎಂದು ಪಶು ಸಂಗೋಪನೆ ಜಂಟಿ ನಿರ್ದೇಶಕ ಮಂಜುನಾಥ್ ಶಿಂಧೆ ಹೇಳಿದ್ದಾರೆ.
ಪರವಾನಿಗೆ ನೀಡುವ ಮುನ್ನ ಮೈಕ್ರೋಚಿಪ್ ಅಳವಡಿಕೆ ಹಾಗೂ ಸಾಕು ಪ್ರಾಣಿಗಳ ಸಂತಾನಹರಣ ಕಡ್ಡಾಯವಾಗಿದೆ. ಇದರ ಜೊತೆಯಲ್ಲಿ ಪ್ರಾಣಿಗಳನ್ನು ತ್ಯಜಿಸಿದ್ದಲ್ಲಿ 1000 ರೂಪಾಯಿ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಬೀದಿ ನಾಯಿಗಳ ಸಾಕಣಿಕೆಗೆ ಹೆಚ್ಚು ಮಹತ್ವ ನೀಡುವ ಸಲುವಾಗಿ ಸ್ಥಳೀಯ ತಳಿಗಳನ್ನು ಸಾಕುವ ಮಾಲೀಕರಿಗೆ ಪರವಾನಿಗೆ ಶುಲ್ಕ ವಿನಾಯಿತಿ ಇರಲಿದೆ.