ಆಧುನಿಕ ಜೀವನದ ಜಂಜಾಟದಲ್ಲಿ ವೈಯಕ್ತಿಕ ಜೀವನ ಹಾಗೂ ವೃತ್ತಿ ಕ್ಷೇತ್ರವನ್ನು ಸರಿದೂಗಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂಥ ಘಟನೆಯೊಂದು ಬೆಂಗಳೂರಿನ ಬೀದಿಯೊಂದರಲ್ಲಿ ಕಂಡು ಬಂದಿದೆ. ರೆಡ್ಡಿಟ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ಸಖತ್ ವೈರಲ್ ಆಗಿದೆ. ಅನೇಕರು ಈ ವಿಡಿಯೋವನ್ನು ನೋಡಿ ನಕ್ಕಿದರೆ ಇನ್ನೂ ಹಲವರು ಈಗಿನ ಜಮಾನ ಮನುಷ್ಯನನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಚಲಿಸುತ್ತಿದ್ದ ಬೈಕ್ನ ಮೇಲೆ ಕುಳಿತ ಯುವತಿಯೊಬ್ಬರು ಲ್ಯಾಪ್ಟಾಪ್ ಓಪನ್ ಮಾಡಿಕೊಂಡು ಕೆಲಸ ಮಾಡುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ ಈ ಯುವತಿ ಹೆಲ್ಮೆಟ್ ಧರಿಸಿಲ್ಲ. ಅತಿಯಾದ ಕೆಲಸ ಮನುಷ್ಯನನ್ನು ಯಾವ ಹಂತಕ್ಕೆ ತಲುಪಿಸಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತ್ರ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ರೆಡಿಟ್ನಲ್ಲಿ ಅನೇಕರ ಗಮನ ಸೆಳೆದಿದೆ. ಜೀವಕ್ಕೆ ಸುರಕ್ಷತೆಯಿಲ್ಲದ ಕೆಲಸಗಳನ್ನು ಯಾಕೆ ಮಾಡಬೇಕು ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ಇದು ಸಾಯಲು ಹೊಸ ಆಯ್ಕೆಯಾಗಿದೆ ಅಷ್ಟೇ ಎಂದು ಕಿಡಿಕಾರಿದ್ದಾರೆ.