ವಿಮಾನಗಳಲ್ಲಿ ಪ್ರಯಾಣಿಕರೂ ಒಂದಷ್ಟು ನಿಯಮ ಪಾಲನೆ ಕಡ್ಡಾಯ. ಆದರೆ ಅನೇಕ ಉದಾಹರಣೆಗಳಲ್ಲಿ ಪ್ರಯಾಣಿಕರು ಅಸಹನೆ ಹೊರಹಾಕಿ ವಾತಾವರಣ ಕಲುಷಿತಗೊಳಿಸುವ ಉದಾಹರಣೆಗಳಿವೆ.
ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (ಪಿಐಎ)ನ ಪೇಶಾವರ- ದುಬೈ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಪ್ರಯಾಣದ ನಡುವೆ ಅಬ್ಬರಿಸುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆ ಅಶಿಸ್ತಿನ ಪ್ರಯಾಣಿಕನು ಸೀಟುಗಳನ್ನು ಗುದ್ದುವುದು, ವಿಮಾನದ ಕಿಟಕಿಗೆ ಒದೆಯುವುದು ಮತ್ತು ವಿಮಾನದ ಸಿಬ್ಬಂದಿಯೊಂದಿಗೆ ಜಗಳವಾಡುವುದು ಕಂಡುಬಂದಿದೆ.
ಮೊದಲು ವಿಮಾನ ಸಿಬ್ಬಂದಿಯೊಂದಿಗೆ ಜಗಳ ಆರಂಭವಾಯಿತು. ಬಳಿಕ ಅಲ್ಲಿನ ಆಸನ ಮುರಿಯುವುದಾಗಿಹೇಳಿ ಒದೆಯಲು ಪ್ರಾರಂಭಿಸುತ್ತಾನೆ. ನಂತರ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಪೈಲೈಟ್ ಅಟೆಂಡೆಂಟ್ಗಳು ಮಧ್ಯಪ್ರವೇಶಿಸಿದಾಗ ಆತ ಅವರ ಮೇಲೂ ಹಲ್ಲೆ ನಡೆಸಿದ್ದಾನೆ.
ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಲು, ವಿಮಾನಯಾನ ಕಾನೂನಿನ ಪ್ರಕಾರ ಆ ಪ್ರಯಾಣಿಕನನ್ನು ಆತನ ಆಸನದಲ್ಲಿ ಬಲವಂತವಾಗಿ ಕೂರಿಸಲಾಗಿದೆ. ಪ್ರೋಟೋಕಾಲ್ಗಳ ಪ್ರಕಾರ, ವಿಮಾನದ ಕ್ಯಾಪ್ಟನ್ ದುಬೈನ ಏರ್ ಟ್ರಾಫಿಕ್ ಕಂಟ್ರೋಲರ್ ಅನ್ನು ಸಂಪಕಿರ್ಸಿ ಭದ್ರತೆಯನ್ನು ಕೋರಿದರು.
ದುಬೈ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಭದ್ರತಾ ಅಧಿಕಾರಿಗಳು ಆ ಪ್ರಯಾಣಿಕನನ್ನು ವಶಕ್ಕೆ ತೆಗೆದುಕೊಂಡರು. ಘಟನೆ ಸೆಪ್ಟೆಂಬರ್ 14 ರಂದು ನಡೆದಿದ್ದು, ಪಿಐಎ ಅಧಿಕಾರಿಗಳ ಪ್ರಕಾರ, ಪ್ರಯಾಣಿಕನನ್ನು ವಿಮಾನಯಾನ ಸಂಸ್ಥೆ ಬ್ಲಾಕ್ ಲಿಸ್ಟ್ಗೆ ಸೇರಿಸಿದೆ.