
ಇತ್ತೀಚಿಗೆ ಪ್ರಣಯ ಪಕ್ಷಿಗಳೆಂದೇ ಬಿಂಬಿತವಾಗಿರುವ ಎಎಪಿಯ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡು ತಮ್ಮ ಸಂಬಂಧದ ಬಗ್ಗೆ ಇರುವ ವದಂತಿ ಬಲಗೊಳ್ಳುವಂತೆ ಮಾಡಿದ್ದಾರೆ.
ಬುಧವಾರದಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಮೊಹಾಲಿ ಕ್ರೀಡಾಂಗಣದ ಬಾಲ್ಕನಿಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು.
ಪರಿಣಿತಿ ಮತ್ತು ರಾಘವ್ ಮೊಹಾಲಿಯಲ್ಲಿ ಒಟ್ಟಿಗೆ ಪಂದ್ಯವನ್ನು ಆನಂದಿಸುತ್ತಿರುವುದನ್ನು ಗಮನಿಸಬಹುದು. ಈ ಜೋಡಿ ನೋಡಿದ ಅಭಿಮಾನಿಗಳು ಕೂಗುತ್ತಾ ಅವರತ್ತ ಕೈ ಬೀಸಿದ್ದಾರೆ. ಈ ವೇಳೆ ನಗುತ್ತಾ ನಾಚಿಕೊಂಡವರಂತೆ ಕಂಡ ರಾಘವ್ ಚಡ್ಡಾ ಮತ್ತು ಪರಿಣಿತಿ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ಪರಿಣಿತಿ ಮತ್ತು ರಾಘವ್ ಮೇ 13 ರಂದು ತಮ್ಮ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಪರಿಣಿತಿ ಮತ್ತು ರಾಘವ್ ಕೆಲ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಅವರ ಕುಟುಂಬಗಳು ಸಹ ಹಲವಾರು ವರ್ಷಗಳಿಂದ ಪರಿಚಿತವಾಗಿವೆ.