ಗುಜರಾತ್ : ಬೀದಿ ನಾಯಿಗಳು ದಾಳಿ ನಡೆಸಿ 2 ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ರಾಜ್ಯದ ಮೊರ್ಬಿ ನಗರದ ಮೆಟೆಲ್ ರಸ್ತೆಯಲ್ಲಿರುವ ಸೆರಾಮಿಕ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಜುಲೈ 11 ರಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬಕ್ಕೆ ಸೇರಿದ ಎರಡೂವರೆ ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಮಗುವನ್ನ ಕಚ್ಚಿ ಎಳೆದಾಡಿದ್ದವು. ಗಂಭೀರವಾಗಿ ಗಾಯಗೊಂಡ ಮಗುವನ್ನು ವಾಂಕನೇರ್ ನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಬೀದಿ ನಾಯಿ ಕಡಿತದಿಂದ ಮಾನವ ದೇಹಕ್ಕೆ ಅಪಾಯಕಾರಿ ಬ್ಯಾಕ್ಟೀರಿಯಾಗಳು ಹರಡಲಿದ್ದು, ಚಿಕಿತ್ಸೆ ನೀಡದಿದ್ದಾಗ ಗಂಭೀರ ಮತ್ತು ಕೆಲವೊಮ್ಮೆ ಮಾರಣಾಂತಿಕ ಸೋಂಕುಗಳಿಗೆ ಕಾರಣವಾಗಬಹುದು.
ಜುಲೈ 9 ರಂದು ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಕೃಷಿ ಜಮೀನಿಗೆ ತೆರಳುತ್ತಿದ್ದ 12 ವರ್ಷದ ಬಾಲಕನನ್ನು ಮೂರು ಬೀದಿ ನಾಯಿಗಳು ದಾಳಿ ಮಾಡಿ ಕೊಂದಿದ್ದವು.ಸುಮಾರು 500 ಮೀಟರ್ ದೂರದಲ್ಲಿರುವ ತನ್ನ ಮನೆ ಮತ್ತು ಕೃಷಿ ಜಮೀನಿನ ನಡುವಿನ ನಿರ್ಜನ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ನಾಯಿಗಳು ಹುಡುಗನನ್ನು ಸುತ್ತುವರಿದು ದಾಳಿ ಮಾಡಿವೆ.