ಟ್ವಿಟರ್ನ ಸಿಇಓ ಆಗಿದ್ದ ಜಾಕ್ ಡೋರ್ಸೆ ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕದ ಪರಾಗ್ ಅಗರ್ವಾಲ್ ನೇಮಕಗೊಂಡಿದ್ದಾರೆ.
ಅಗರ್ವಾಲ್ ಐಐಟಿ ಬಾಂಬೆಯ ಮಾಜಿ ವಿದ್ಯಾರ್ಥಿಯಾಗಿದ್ದಾರೆ. 2018ರಲ್ಲಿ ಚೀಫ್ ಟೆಕ್ನಾಲಜಿ ಆಫೀಸರ್ ಆಗಿ ಟ್ವಿಟರ್ ಸೇರ್ಪಡೆಯಾಗಿದ್ದ ಪರಾಗ್ ಅಗರ್ವಾಲ್ ಇಂದು ಬಹುದೊಡ್ಡ ಸಾಮಾಜಿಕ ಜಾಲತಾಣ ವೇದಿಕೆಯ ಸಿಇಓ ಆಗಿ ನೇಮಕಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪರಾಗ್ ಅಗರ್ವಾಲ್ ಟ್ವಿಟರ್ ಸಿಇಓ ಆಗಿ ಆಯ್ಕೆಯಾಗುತ್ತಿದ್ದಂತೆಯೇ ಭಾರತೀಯರ ಖುಷಿಗೆ ಪಾರವೇ ಇಲ್ಲ ಎಂಬಂತಾಗಿದೆ. ಅಲ್ಲದೇ ಪರಾಗ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಭಾರತೀಯರು ಉತ್ಸುಕರಾಗಿದ್ದಾರೆ. ಟ್ವಿಟರ್ನ ನೂತನ ಸಿಇಓ ಪರಾಗ್ ಅಗರ್ವಾಲ್ ಕುರಿತ ಐದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ :
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಿಹೆಚ್ಡಿ ಪಡೆದ ಅಗರ್ವಾಲ್ ಅಕ್ಟೋಬರ್ 2011ರಲ್ಲಿ ಡಿಸ್ಟಿಂಗ್ವಿಶ್ಡ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಟ್ವಿಟರ್ಗೆ ನೇಮಕಗೊಂಡರು. ಸ್ಟ್ಯಾನ್ಫೋರ್ಡ್ನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಪರಾಗ್ ಮೈಕ್ರೋಸಾಫ್ಟ್, ಯಾಹೂ ಹಾಗೂ ಎಟಿ & ಟಿ ಪ್ರಯೋಗಾಲಯದಲ್ಲಿ ರಿಸರ್ಚ್ ಇಂಟರ್ನ್ ಆಗಿ ಸೇವೆ ಸಲ್ಲಿಸಿದ್ದಾರೆ.
ಸಿಇಓ ಸ್ಥಾನದಿಂದ ಕೆಳಗಿಳಿದ ಜ್ಯಾಕ್ ಡೋರ್ಸಿಯಂತೆಯೇ ಪರಾಗ್ ಕೂಡ ಶಾಂತ, ಸಭ್ಯ ಹಾಗೂ ಇಂಟರ್ನೆಟ್ ಬಗ್ಗೆ ಅತ್ಯಂತ ಹೆಚ್ಚಿನ ಮಾಹಿತಿಯನ್ನು ಹೊಂದಿದ್ದಾರೆ. ಪರಾಗ್ ಒಬ್ಬ ಅತ್ಯುತ್ತಮ ನಾಯಕ ಎಂದು ಟ್ವಿಟರ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಈ ಹಿಂದೆ ಮೆಟಾ ವೇದಿಕೆಯ ಸಿಇಓ ಜುಕರ್ ಬರ್ಗ್ರನ್ನು ಅತ್ಯಂತ ಕಿರಿಯ ಸಿಇಓ ಎಂದು ಕರೆಯಲಾಗುತ್ತಿತ್ತು. ಆದರೆ ಇದೀಗ ಪರಾಗ್ ಅಗರ್ವಾಲ್ ವಿಶ್ವದ ಅತ್ಯಂತ ಕಿರಿಯ ಸಿಇಓ ಎಂದು ಹೇಳಲಾಗ್ತಿದೆ. ಭದ್ರತಾ ದೃಷ್ಟಿಯಿಂದ ಪರಾಗ್ ಜನ್ಮ ದಿನಾಂಕವನ್ನು ಟ್ವಿಟರ್ ಬಹಿರಂಗಪಡಿಸಿಲ್ಲ. ಆದರೆ ಪರಾಗ್ ಅಗರ್ವಾಲ್ 37 ವರ್ಷ ಪ್ರಾಯದವರಾಗಿದ್ದಾರೆ ಹಾಗೂ ಜುಕರ್ ಬರ್ಗ್ ಕೂಡ 1984ರಲ್ಲೇ ಜನಿಸಿದ್ದಾರೆ. ಮೇ 14 ಜುಕರ್ ಬರ್ಗ್ ಜನ್ಮ ದಿನಾಂಕವಾಗಿದೆ. ಇದಾದ ಬಳಿಕ ಪರಾಗ್ ಜನಿಸಿದ್ದಾರೆ ಎನ್ನಲಾಗಿದೆ.
ಪರಾಗ್ ಮುಂಬೈನಲ್ಲಿ ಜನಿಸಿದವರು. ಅಟಾಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಪರಾಗ್ ತಾಯಿ ನಿವೃತ್ತ ಶಿಕ್ಷಕಿ. ತಂದೆ ಪರಮಾಣು ಶಕ್ತಿ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು. ಪರಾಗ್ ವೆಂಚರ್ ಕ್ಯಾಪಿಟಲ್ ಹೂಡಿಕೆದಾರರಾದ ವಿನೀತ್ ಅಗರ್ವಾಲ್ ರನ್ನು ವರಿಸಿದ್ದಾರೆ. ಈ ದಂಪತಿಗೆ ಅಂಶ್ ಎಂಬ ಪುಟ್ಟ ಪುತ್ರನಿದ್ದಾನೆ. ಪುಟ್ಟ ಬಾಲಕ ಕೂಡ ತನ್ನದೇ ಆದ ಟ್ವಿಟರ್ ಖಾತೆ ಹೊಂದಿದ್ದಾನೆ.