ನವದೆಹಲಿ: ನೀವು ಪ್ಯಾನ್ ಕಾರ್ಡ್ ಹೊಂದಿರುವಿರಾ ? ಕಾರ್ಡ್ ಹೊಂದಿದ್ದು, ಅದನ್ನು ಇನ್ನೂ ಆಧಾರ್‌ನೊಂದಿಗೆ ಲಿಂಕ್ ಮಾಡಿಲ್ಲವೆ ? ಹಾಗಿದ್ದರೆ ಈ ಎಚ್ಚರಿಕೆಯನ್ನೊಮ್ಮೆ ಓದಿಬಿಡಿ. ಪ್ಯಾನ್ ಕಾರ್ಡ್‌ದಾರರು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ಬರುವ ಮಾರ್ಚ್ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ.
ಇದಾಗಲೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಎರಡೂ ಕಾರ್ಡ್ಗಳನ್ನು ಲಿಂಕ್ ಮಾಡಲು ಕಳೆದ ಮಾರ್ಚ್ 31ರ ವರೆಗೆ ಅನುಮತಿ ನೀಡಲಾಗಿತ್ತು. ಹೀಗೆ ಮಾಡದಿದ್ದರೆ 1 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಹೇಳಲಾಗಿತ್ತು. ಆದರೆ ಇದೀಗ ಹೊಸ ಘೋಷಣೆ ಮಾಡಲಾಗಿದ್ದು, ಬರುವ ಮಾರ್ಚ್ ವರೆಗೆ ಗಡುವು ನೀಡಲಾಗಿದೆ. ಒಂದು ವೇಳೆ ಲಿಂಕ್ ಮಾಡದೇ ಹೋದರೆ ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ.
ಆಧಾರ್ ಕಾರ್ಡ್ ಜತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದೇ ಹೋದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಪ್ಯಾನ್ ಕಾರ್ಡ್ ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ರೀತಿಯಾದರೆ ಅದನ್ನು ಪುನಃ ಚಾಲ್ತಿಯಲ್ಲಿ ಪಡೆದುಕೊಳ್ಳಲು ದೊಡ್ಡ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನಿಗದಿತ ಶುಲ್ಕವನ್ನು ಪಾವತಿಸಬೇಕು. ಶುಲ್ಕ ಪಾವತಿಯ ಬಳಿಕ ನಿಗದಿತ ಪ್ರಾಧಿಕಾರಕ್ಕೆ ಹೋಗಿ ಈ ಕಾರ್ಡ್ಗಳನ್ನು ಪುನಃ ಕಾರ್ಯಗತಗೊಳಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.