ಅನ್ಯರಿಗೆ ಮಿಡಿಯುವ ಮನಸ್ಸಿನಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳೂ ಸಹ ಅವರ ಜೀವನದಲ್ಲಿ ದೊಡ್ಡ ಖುಷಿಯೊಂದನ್ನು ತರಬಲ್ಲದು. ಇಂಥದ್ದೇ ಒಂದು ಕೆಲಸವನ್ನು ಪಾಕಿಸ್ತಾನದ ಮಹಿಳೆಯೊಬ್ಬರು ಮಾಡಿದ್ದು, ಅವರೀಗ ನೆಟ್ಟಿಗರ ಪಾಲಿನ ಫೇವರಿಟ್ ಆಗಿಬಿಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಎಂದು ಇನ್ಸ್ಟಾಗ್ರಾಂ ಬಯೋನಲ್ಲಿ ಪರಿಚಯಿಸಿಕೊಂಡಿರುವ ಫೈಜ಼ಾ ನಯೀಮ್ ಕಳೆದ ತಿಂಗಳು ಬಲೂನ್ ಮಾರಾಟ ಮಾಡುತ್ತಿದ್ದ ಬಾಲಕನೊಬ್ಬನ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ. ಅವರ ಈ ಹೃದಯಸ್ಪರ್ಶಿ ಕೆಲಸ ಸಾಮಾಜಿಕ ಜಾಲತಾಣದಲ್ಲಿ ಬಹಳ ಹೃದಯಗಳನ್ನು ಗೆದ್ದಿದೆ.
ಫೈಝಾ ತಮ್ಮ ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಬಲೂನ್ ಮಾರುತ್ತಿದ್ದ ಬಾಲಕ ಕ್ರಿಶ್ ಕಣ್ಣಿಗೆ ಬಿದ್ದಿದ್ದಾನೆ. ಕೂಡಲೇ ಕಾರನ್ನು ನಿಲ್ಲಿಸಿದ ಫೈಝಾ ಆತನಿಗೆ ಬಿರಿಯಾನಿ ಕೊಟ್ಟಿದ್ದಾರೆ. ಇದರಿಂದ ಬಾಲಕನ ಮೊಗದಲ್ಲಿ ಭಾರೀ ಮಂದಹಾಸ ಮೂಡಿದೆ.
ಇಷ್ಟಕ್ಕೇ ನಿಲ್ಲದ ಫೈಝಾ, ಬಲೂನಿನೆ ಬೆಲೆ ತಿಳಿದುಕೊಂಡು, ತನಗೆ ಆತನ ಬಳಿ ಇದ್ದ ಎಲ್ಲ ಬಲೂನುಗಳನ್ನು ಕೊಡಲು ಕೇಳಿದ್ದಾರೆ. ಆತ ತನಗೆ ಬಲೂನುಗಳನ್ನು ಉಚಿತವಾಗಿ ಕೊಡಲು ಮುಂದಾದರೂ ಸಹ ಇದಕ್ಕೆ ಒಪ್ಪದ ಫೈಝಾ ದುಡ್ಡು ಪಾವತಿ ಮಾಡಿದ್ದಾರೆ. ಈ ಮೂಲಕ ಬಾಲಕನಿಗೆ ಆ ದಿನದ ಮಟ್ಟಿಗೊಂದು ರಜೆ ನೀಡಿ, ತುತ್ತಿನ ಚೀಲದ ಚಿಂತೆ ಪಕ್ಕಕ್ಕಿಟ್ಟು ಬಿರಿಯಾನಿ ಸವಿಯಲು ಅನುವು ಮಾಡಿಕೊಟ್ಟಿದ್ದಾರೆ ಫೈಝಾ.
https://www.youtube.com/watch?v=1F_4FUOJB6w