ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುನ್ಖ್ವಾದ ಬನ್ನು ಸೇನಾ ನೆಲೆಯಲ್ಲಿ ಮಂಗಳವಾರ ಇಫ್ತಾರ್ ಬಳಿಕ ಅವಳಿ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದ್ದು, ಆರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ರಂಜಾನ್ ತಿಂಗಳಿನಲ್ಲಿ ಈ ಭೀಕರ ದಾಳಿ ನಡೆದಿರುವುದು ಆಘಾತಕಾರಿಯಾಗಿದೆ.
ಬನ್ನು ಕಂಟೋನ್ಮೆಂಟ್ನ ಹೊರವಲಯದ ಗೋಡೆಯನ್ನು ಭೇದಿಸಿದ ಇಬ್ಬರು ಆತ್ಮಾಹುತಿ ಬಾಂಬರ್ಗಳು ಸ್ಫೋಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಜೆ ಸೂರ್ಯಾಸ್ತದ ನಂತರ ಜನರು ಇಫ್ತಾರ್ ಆಚರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಐದರಿಂದ ಆರು ಉಗ್ರರು ನೆಲೆಗೆ ನುಗ್ಗಲು ಪ್ರಯತ್ನಿಸಿದ್ದು, ಭಾರಿ ಗುಂಡಿನ ಚಕಮಕಿ ನಡೆದಿದೆ. ನಂತರ ಎರಡು ಬಾಂಬ್ ಸ್ಫೋಟಗಳು ಖಚಿತವಾಗಿವೆ.
ಪಾಕಿಸ್ತಾನಿ ತಾಲಿಬಾನ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. ಡಜನ್ ಗಟ್ಟಲೆ ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ. ಎರಡು ಸ್ಫೋಟಗಳ ನಂತರ ಬೂದು ಬಣ್ಣದ ಹೊಗೆ ಆಕಾಶಕ್ಕೆ ಚಿಮ್ಮಿದ್ದು, ಗುಂಡಿನ ಶಬ್ದಗಳು ಕೇಳಿಬಂದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬನ್ನು ಪ್ರದೇಶವು ಉಗ್ರರಿಗೆ ಆಗಾಗ ಗುರಿಯಾಗುತ್ತಿದ್ದು, ಕಳೆದ ನವೆಂಬರ್ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ 12 ಯೋಧರು ಹುತಾತ್ಮರಾಗಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಜುಲೈನಲ್ಲಿ, ಆತ್ಮಾಹುತಿ ಬಾಂಬರ್ ಒಬ್ಬ ತನ್ನ ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಿದ್ದ ಮತ್ತು ಇತರ ಉಗ್ರರು ಸೇನಾ ಸೌಲಭ್ಯದ ಹೊರ ಗೋಡೆಯ ಬಳಿ ಗುಂಡಿನ ದಾಳಿ ನಡೆಸಿದ್ದರು.