ನಿರುದ್ಯೋಗ, ದಿವಾಳಿತನ ಅಥವಾ ಸಾಲಬಾಧೆಯಿಂದಾಗಿ 2018-2020 ರ ನಡುವೆ ದೇಶದ 25,000ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಸಂಸತ್ತಿಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳ ಆಧಾರದ ಮೇಲೆ ಮಾತನಾಡಿದ ರೈ, ನಿರುದ್ಯೋಗ ಮತ್ತು ದಿವಾಳಿತನ ಅಥವಾ ಋಣಭಾರದಿಂದಾಗಿ ಆತ್ಮಹತ್ಯೆಗಳು 2018 ರಲ್ಲಿ 7,711 ರಿಂದ 2020 ರಲ್ಲಿ 8,761 ಕ್ಕೆ ಏರಿದ್ದು, ಈ ಅವಧಿಯಲ್ಲಿ 16,091 ಜನರು ದಿವಾಳಿತನ ಅಥವಾ ಸಾಲದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಮೇಲ್ಮನೆಗೆ ತಿಳಿಸಿದ್ದಾರೆ.
ಶಾಖಾಹಾರಿಗಳಿಗೆ ಗುಡ್ ನ್ಯೂಸ್: ಈ ರೈಲುಗಳಲ್ಲಿ ಶೀಘ್ರದಲ್ಲೇ ಸಿಗಲಿದೆ ಸಂಪೂರ್ಣ ಸಸ್ಯಾಹಾರ ಸೌಕರ್ಯ
ಇದೇ ಅವಧಿಯಲ್ಲಿ, ನಿರುದ್ಯೋಗದಿಂದಾಗಿ ಸುಮಾರು 9,140 ಜನರು ತಮ್ಮ ಜೀವನ ಅಂತ್ಯಗೊಳಿಸಿದ್ದು, 2018 ರಲ್ಲಿ 2,741, 2019 ರಲ್ಲಿ 2,851, ಹಾಗೂ 2020ರ ಸಾಂಕ್ರಾಮಿಕ ವರ್ಷದಲ್ಲಿ 3,548 ಮಂದಿ ಈ ಅತಿಯಾದ ನಿರ್ಣಯಕ್ಕೆ ಬಂದಿದ್ದಾರೆ.
2020ರಲ್ಲಿ ದಿವಾಳಿತನ ಅಥವಾ ಋಣಭಾರದಿಂದಾಗಿ 5,213ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿವಾಳಿತನ ಅಥವಾ ಋಣಭಾರಕ್ಕೆ ಬಲಿಯಾದವರ ಸಂಖ್ಯೆ 2019ರಲ್ಲಿ 5,908 ಮತ್ತು 2018 ರಲ್ಲಿ 4,970 ಇದ್ದಿದ್ದು 2020ರಲ್ಲಿ 600ಕ್ಕಿಂತ ಕಡಿಮೆಯಾಗಿದೆ.
ಸರ್ಕಾರವು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು (ಎನ್‌ಎಂಎಚ್‌ಪಿ) ಅನುಷ್ಠಾನಗೊಳಿಸುತ್ತಿದ್ದು, ದೇಶದ 692 ಜಿಲ್ಲೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ಸೇವೆಗಳನ್ನು ಒದಗಿಸುವ ಎನ್‌ಎಂಎಚ್‌ಪಿ ಅಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ (ಡಿಎಂಎಚ್‌ಪಿ) ಅನುಷ್ಠಾನಕ್ಕೆ ಬೆಂಬಲ ನೀಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಸೌಲಭ್ಯಗಳ ಜೊತೆಗೆ ಹೊಸ ಉದ್ಯೋಗ ಸೃಷ್ಟಿಗೆ ಉದ್ಯೋಗದಾತರನ್ನು ಉತ್ತೇಜಿಸಲು ಮತ್ತು ನಿರುದ್ಯೋಗ ತಗ್ಗಿಸಲು ಸರ್ಕಾರವು ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆಗೆ ಮರುಚಾಲನೆ ಕೊಟ್ಟಿದೆ ಎಂದ ಸಚಿವರು, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರಿಗೆ ಉದ್ಯೋಗ ಹೊಂದಾಣಿಕೆಗಾಗಿ ರಾಷ್ಟ್ರೀಯ ವೃತ್ತಿ ಸೇವೆ (NCS) ಯೋಜನೆಯ ಬಗ್ಗೆಯ ಉಲ್ಲೇಖಿಸಿದ್ದಾರೆ.
ಭಾರತದ ಉತ್ಪಾದನಾ ಸಾಮರ್ಥ್ಯಗಳು ಮತ್ತು ರಫ್ತುಗಳನ್ನು ಹೆಚ್ಚಿಸುವ ಪ್ರಮುಖ ವಲಯಗಳಲ್ಲಿ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ರೈ ಇದೇ ಸಂದರ್ಭದಲ್ಲಿ ಗಮನ ಸೆಳೆದಿದ್ದಾರೆ.