ಸೌದಿ ಅರೇಬಿಯಾದ ಮೆಕ್ಕಾ ತೀವ್ರ ಬಿಸಿಲ ಶಾಖಕ್ಕೆ ತತ್ತರಿಸಿದೆ. ಈ ವರ್ಷ ಹಜ್ ಯಾತ್ರೆಯಲ್ಲಿ 1,000ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೆಕ್ಕಾದಲ್ಲಿ ತಾಪಮಾನವು 49 ಡಿಗ್ರಿ ಸೆಲ್ಸಿಯಸ್(120 ಡಿಗ್ರಿ ಫ್ಯಾರನ್‌ಹೀಟ್) ಗೆ ಏರಿದ್ದರಿಂದ ಸಾವಿರಾರು ಜನರು ಶಾಖ ತಡೆಯಲಾಗದೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಲ್ಲಿ ಅರ್ಧಕ್ಕಿಂತ ಹೆಚ್ಚು ನೋಂದಾಯಿಸದ ಯಾತ್ರಿಕರು. ಅರಬ್ ರಾಜತಾಂತ್ರಿಕರ ಪ್ರಕಾರ, ಈಜಿಪ್ಟ್ ನಿಂದ ಬಂದ ಸುಮಾರು 658 ಯಾತ್ರಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ 630 ಮಂದಿ ನೋಂದಣಿಯಾಗದ ಯಾತ್ರಾರ್ಥಿಗಳು.
ಮೂಲಗಳ ಪ್ರಕಾರ, ಭಾರತದಿಂದ ಬಂದಿದ್ದ 90 ಮಂದಿ ಸಾವನ್ನಪ್ಪಿದ್ದಾರೆ. ಜೋರ್ಡಾನ್, ಇಂಡೋನೇಷ್ಯಾ, ಇರಾನ್, ಸೆನೆಗಲ್, ಟುನೀಶಿಯಾದ ಯಾತ್ರಿಕರು ಕೂಡ ಸಾವನ್ನಪ್ಪಿದ್ದಾರೆ. ಹಲವಾರು ಯಾತ್ರಾರ್ಥಿಗಳು ಕಾಣೆಯಾಗಿದ್ದಾರೆ. ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ಕಾಣೆಯಾದವರ ಚಿತ್ರಗಳು ಮತ್ತು ಮಾಹಿತಿಗಾಗಿ ವಿನಂತಿಸಲಾಗಿದೆ.
ಸೌದಿ ಸರ್ಕಾರದ ಪ್ರಕಾರ, ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಹಜ್ ನಲ್ಲಿ ಈ ವರ್ಷ 1.8 ಮಿಲಿಯನ್ ಗಿಂತಲೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ, ಹಜ್ ಅಧಿಕಾರಿಗಳು ಯಾತ್ರಿಕರಿಗೆ ಛತ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಮತ್ತು ಹೈಡ್ರೇಟೆಡ್ ಆಗಿರಲು ಕೇಳಿಕೊಂಡಿದ್ದಾರೆ. ಸೌದಿ ಸೇನೆಯು ಹೀಟ್ ಸ್ಟ್ರೋಕ್ ಸಂತ್ರಸ್ತರಿಗೆ ವೈದ್ಯಕೀಯ ಘಟಕಗಳೊಂದಿಗೆ 1,600 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಮತ್ತು 30 ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಿದೆ. ಇನ್ನೂ 5,000 ಆರೋಗ್ಯ ಮತ್ತು ಪ್ರಥಮ ಚಿಕಿತ್ಸಾ ಸ್ವಯಂಸೇವಕರನ್ನು ಸಹ ನಿಯೋಜಿಸಲಾಗಿದೆ. ಕಳೆದ ವರ್ಷ 240 ಯಾತ್ರಿಕರು ಸಾವು ಕಂಡಿದ್ದರು. ಅವರಲ್ಲಿ ಹೆಚ್ಚಿನವರು ಇಂಡೋನೇಷಿಯನ್ನರು.