ಕೊರೊನಾ ಎರಡನೆ ಅಲೆಯಲ್ಲಿ ಇಳಿಮುಖ ಕಾಣ್ತಿರೋದು ಒಂದೆಡೆ ಸಮಾಧಾನಕಾರ ವಿಚಾರವಾದರೆ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ ನಡುಕ ಹುಟ್ಟಿಸಿದೆ. ಆದರೆ ಪ್ರವಾಸಿಗರು ಮಾತ್ರ ಕೊರೊನಾವನ್ನೂ ಲೆಕ್ಕಿಸದೇ ಪ್ರವಾಸ ಮಾಡೋದ್ರಲ್ಲೇ ನಿರತರಾಗಿದ್ದಾರೆ. ಈ ನಡುವೆ ಲಡಾಕ್ನ ಬಿಜೆಪಿ ರಾಜ್ಯಾಧ್ಯಕ್ಷ ಪ್ರವಾಸಿ ತಾಣದಲ್ಲಿ ಗಲೀಜು ಮಾಡುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಲಡಾಖ್ನ ಪ್ರವಾಸಿ ತಾಣಗಳಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ವಿವಿಧ ಕಸದ ರಾಶಿಯ ಫೋಟೋ ಶೇರ್ ಮಾಡಿದ ಲಡಾಕ್ನ ಬಿಜೆಪಿ ರಾಜ್ಯಾಧ್ಯಕ್ಷ ಜಮಯಂಗ್ ತ್ಸೆರಿಂಗ್ ನಂಗ್ಯಾಲ್ ಇದು ನಮ್ಮ ಮನೆ, ನಿಮ್ಮ ಕಸದ ಬುಟ್ಟಿಯಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಶ್ರೀಮಂತ ಸಂಸ್ಕೃತಿ, ಅದ್ಭುತ ಪ್ರಕೃತಿ ಹಾಗೂ ಉಜ್ವಲ ಭವಿಷ್ಯವನ್ನ ಗೌರವಿಸಿ ಎಂದು ಹೇಳಿದ್ದಾರೆ.
ಚಾರಣ ಪ್ರಿಯರಿಗೆ ಹಾಗೂ ಪ್ರಕೃತಿ ಸೌಂದರ್ಯವನ್ನ ಇಷ್ಟ ಪಡುವವರಿಗೆ ಲಡಾಖ್ ಪರ್ವತಗಳು ಫೇವರಿಟ್ ತಾಣವಾಗಿದೆ. ಲಡಾಕ್ನಲ್ಲಿ ಪ್ರಸ್ತುತ 20,204 ಕೊರೊನಾ ಪ್ರಕರಣಗಳಿವೆ. ಹಾಗೂ ಕೊರೊನಾದಿಂದಾಗಿ 206 ಮಂದಿ ಸಾವನ್ನಪ್ಪಿದ್ದಾರೆ.