ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಒನ್ ನೇಷನ್, ಒನ್ ಕಾರ್ಡ್’ ಹೆಸರಿನಲ್ಲಿ ವಂಚಕರಿಬ್ಬರು ಜನರಿಗೆ ಮೋಸ ಮಾಡಿ ಬರೋಬ್ಬರಿ 95 ಲಕ್ಷ ರೂಪಾಯಿ ದೋಚಿದ ಘಟನೆ ಬೆಳಕಿಗೆ ಬಂದಿದೆ.
ನೂತನವಾಗಿ ಜಾರಿಯಾಗಿರುವ ಒನ್ ನೇಷನ್, ಒನ್ ಕಾರ್ಡ್ ಯೋಜನೆಯನ್ನೇ ಬಂಡವಾಳ ಮಾಡಿಕೊಂಡ ಇಬ್ಬರು, ಎನ್ ಜಿಓ ಮೂಲಕ ಉದ್ಯೋಗ ಕೊಡಿಸುವ ನೆಪದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿದ್ದಾರೆ.
ಮಧುಗಿರಿ ಮೂಲದ ಸುಧೀರ್ ಬಾಬು ಉರ್ಫ್ ಸುಧೀರ್ ರೆಡ್ಡಿ ಹಾಗೂ ಶಶಾಂಕ್ ಎಸ್.ಎನ್ ಎಂಬುವವರು ಎನ್ ಜಿ ಓ ಮೂಲಕ ಜನರಿಗೆ ಮೋಸ ಮಾಡಿದ್ದಾರೆ. ಒನ್ ನೇಷನ್ ಒನ್ ಕಾರ್ಡ್ ಯೋಜನೆ ಕರ್ನಾಟಕಕ್ಕೆ ಅನ್ವಯವಾಗುವಂತೆ ಗುತ್ತಿಗೆ ಪಡೆದಿದ್ದೇವೆ. ಈ ಯೋಜನೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ಎನ್ ಜಿಓ ಮುಖ್ಯಸ್ಥರೊಬ್ಬರು ಜನರನ್ನು ನಂಬಿಸಿದ್ದಾನೆ.
ವಿಜಯಪುರದ ತೊರವಿ ಗ್ರಾಮದ ಸ್ಪೂರ್ತಿ ವುಮೆನ್ಸ್ ರೂರಲ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯಸ್ಥೆ ಶಶಿಕಲಾ ತಳಸದಾರ ಎಂಬುವವರಿಗೆ ಕರೆ ಮಾಡಿ ಈ ಯೋಜನೆಯ ಗುತ್ತಿಗೆ ನಮಗೆ ಸಿಕ್ಕಿದ್ದು, ಒಂದು ಗ್ರಾಮ ಪಂಚಾಯಿತಿಗೆ ಒಬ್ಬರು ಸಂಯೋಜಕರು, 25 ಜನ ಸಹಾಯಕರು , ಕಂಪ್ಯೂಟರ್ ಆಪರೇಟರ್ಸ್, ಡಾಟಾ ಎಂಟ್ರಿ ಮಾಡುವವರು ಬೇಕಾಗಿದ್ದಾರೆ. ಇಡೀ ರಾಜ್ಯದ ನೇಮಕಾತಿಯನ್ನು ನಿಮ್ಮ ಎನ್ ಜಿ ಓ ಮೂಲಕವೇ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಕೋ-ಆರ್ಡಿನೇಟ್ ಪೋಸ್ಟ್ ಗೆ 10 ಸಾವಿರ ಹಾಗೂ ಇತರೆ ಹುದ್ದೆಗೆ 1299 ರೂಪಾಯಿ ಭದ್ರತಾ ಶುಲ್ಕವನ್ನು ಉದ್ಯೋಗಾಕಾಂಕ್ಷಿಗಳಿಂದ ಪಡೆಯವೇಕು. ನಾವು ಆನ್ ಲೈನ್ ಮೂಲಕ ಪರೀಕ್ಷೆ ನಡೆಸುತ್ತೇವೆ ಎಂದಿದ್ದಾರೆ. ಶಶಿಕಲಾ ರಾಜ್ಯದ 600 ಉದ್ಯೋಗಾಕಾಂಕ್ಷಿಗಳಿಂದ ತಮ್ಮ ಖಾತೆಗೆ ಹಣ ಹಾಕಿಸಿಕೊಂಡು ಬಳಿಕ ಆ ಹಣವನ್ನು ಸುಧೀರ್ ಬಾಬು ಹಾಗೂ ಶಶಾಂಕ್ ಹೇಳಿದ ಖಾತೆಗೆ ಜಮಾ ಮಾಡಿದ್ದಾರೆ.
ಕೆಲ ದಿನಗಳ ಬಳಿಕ ಸುಧೀರ್ ಬಾಬು ಹಾಗೂ ಶಶಾಂಕ್ ಮೇಲೆ ಅನುಮಾನಗೊಂಡು ನಗರದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಾಚಾರಣೆಗೆ ಇಳಿದ ಪೊಲೀಸರು ಸುಧೀರ್ ಬಾಬು ಹಾಗೂ ಶಶಾಂಕ್ ಎಂಬುವವರನ್ನು ಬಂಧಿಸಿ ವಿಚರಣೆ ನಡೆಸಿದ್ದು, ಒನ್ ನೇಷನ್, ಒನ್ ಕಾರ್ಡ್ ಯೋಜನೆಗೂ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ. ಹಣ ದೋಚುವ ಉದ್ದೇಶಕ್ಕೆ ಈರೀತಿ ಕಥೆ ಕಟ್ಟಿದ್ದಾರೆ ಎಂಬುದು ಬಯಲಾಗಿದೆ. ಬಂಧಿತರಿಂದ 14 ಜನರ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 10 ಲಕ್ಷ ಡೆಬಿಟ್ ಪ್ರೀಜ್ ಮಾಡಲಾಗಿದೆ. ಈ ಜಾಲದ ಹಿಂದೆ ಇನ್ನಷ್ಟು ಜನರ ಕೈವಾಡ ಶಂಕೆ ಇದ್ದು, ತನಿಖೆ ಮುಂದುವರೆದಿದೆ.