ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಸ್ಟಾರ್ ಅಥ್ಲೀಟ್‌ಗಳು ತಮ್ಮ ಕುಟುಂಬವನ್ನು ಪೋಷಿಸಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಕ್ರೀಡಾಪಟುವಿನ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಒಂದು ಕಾಲದಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಫುಟ್ಬಾಲ್ ಆಟಗಾರ ಪೌಲಮಿ ಅಧಿಕಾರಿಯ ಕಥೆ ಇದು. ಅವರೀಗ ಜೊಮ್ಯಾಟೊದ ಫುಡ್ ಡೆಲವರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ಅವರು ನೋವನ್ನು ತೋಡಿಕೊಂಡಿದ್ದಾರೆ.
ಕೋಲ್ಕತಾದ ಬೆಹಲಾ ಪ್ರದೇಶದ ಶಿಬ್ರಾಂಪುರ ನಿವಾಸಿಯಾಗಿರುವ ಪೌಲಮಿ ಪ್ರಸ್ತುತ ಚಾರುಚಂದ್ರ ಕಾಲೇಜಿನಲ್ಲಿ 3ನೇ ವರ್ಷದ ವಿದ್ಯಾರ್ಥಿನಿ. ಅಂಡರ್ 16 ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಜರ್ಮನಿ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಇತರ ಹಲವು ಸ್ಥಳಗಳಿಗೆ ಇವರು ಪ್ರಯಾಣಿಸಿದ್ದಾರೆ.
ಆದಾಗ್ಯೂ, ಪೌಲಮಿ ಕನಸುಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಕುಟುಂಬ ನಿರ್ವಹಣೆ ಮುಖ್ಯವಾಯಿತು. ಇದೇ ಕಾರಣಕ್ಕೆ ಫುಡ್ ಡೆಲವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಜೀವನ ಕಥೆಯನ್ನು ನೋಡಿ ನೆಟ್ಟಿಗರು ಕಣ್ಣೀರು ಹಾಕುತ್ತಿದ್ದು, ಇವರಿಗೆ ಸರ್ಕಾರ ನೆರವು ಮಾಡಬೇಕು ಎಂದು ಕೋರುತ್ತಿದ್ದಾರೆ.