
ಆದಿಪುರುಷ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಆರಂಭವಾದ ದಿನದಿಂದಲೂ ಭಾರೀ ವಿರೋಧವನ್ನು ಎದುರಿಸಿದೆ. ಕಳಪೆ ವಿಎಫ್ಎಕ್ಸ್ ಹಾಗೂ ಸಂಭಾಷಣೆಯ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಆದಿಪುರುಷ್ ಸಿನಿಮಾದ ಸಂಭಾಷಣೆಯ ಬಗ್ಗೆ ಉಂಟಾದ ಟೀಕೆಗಳ ವಿಚಾರವಾಗಿ ಮಾತನಾಡಿದ ಸಿನಿಮಾದ ಸಂಭಾಷಣಕಾರ ಮನೋಜ್ ಮುಂತಾಶಿರ್ ಪ್ರೇಕ್ಷಕರ ಭಾವನೆಗೆ ಧಕ್ಕೆಯುಂಟು ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.
ಆದಿಪುರುಷ್ ಸಿನಿಮಾದ ಡೈಲಾಗ್ಸ್ ಬರೆದಿರುವ ಮನೋಜ್ ಈಗಾಗಲೇ ಸಾಕಷ್ಟು ವಿರೋಧ ಮತ್ತು ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾರೆ. ಒಂದು ವರ್ಗದ ಪ್ರೇಕ್ಷಕರು ಸಿನಿಮಾದ ಸಂಭಾಷಣೆಯನ್ನು ಕಟ್ಟುನಿಟ್ಟಾಗಿ ವಿರೋಧಿಸಿದ್ದಾರೆ. ಹೀಗಾಗಿ ನಾವು ಅದನ್ನು ಬದಲಾಯಿಸಿದ್ದೇವೆ ಕೂಡ. ಆದರೂ ಜನರ ಭಾವನೆಗೆ ನೋವುಂಟು ಮಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆಂದು ಮನೋಜ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಆದಿಪುರುಷ್ ಸಿನಿಮಾದಿಂದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕೈ ಮುಗಿದು ನಾನು ಬೇಷರತ್ ಕ್ಷಮೆಯಾಚಿಸುತ್ತಿದ್ದೇನೆ. ಪ್ರಭು ಭಜರಂಗಬಲಿ ನಮ್ಮನ್ನು ಒಗ್ಗೂಡಿಸಲಿ ಹಾಗೂ ನಮ್ಮ ಪವಿತ್ರ ಸನಾತನ ಧರ್ಮ ಹಾಗೂ ರಾಷ್ಟ್ರ ಸೇವೆ ಮಾಡುವ ಶಕ್ತಿಯನ್ನು ನಮಗೆ ನೀಡಲಿ ಎಂದು ಮನೋಜ್ ಬರೆದಿದ್ದಾರೆ.
ಈ ಹಿಂದೆ ಮಾಧ್ಯಮಗಳಿಗೆ ಸಂದರ್ಶನ ನೀಡುವ ವೇಳೆ ಆದಿಪುರುಷ್ ಸಿನಿಮಾದ ಡೈಲಾಗ್ಗಳನ್ನು ಸಮರ್ಥಿಸಿಕೊಂಡಿದ್ದ ಮನೋಜ್, ಹನುಮಂತ ದೇವರೇ ಅಲ್ಲ. ಆತ ಭಗವಾನ್ ರಾಮನ ಭಕ್ತರಲ್ಲಿ ಒಬ್ಬ ಎಂದು ವಾದಿಸಿದ್ದರು.