ಕೊರೊನಾ ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ಕೊರೊನಾ ವೈರಾಣು ಮಾತ್ರವೇ ಕೊರೊನಾ ಸೋಂಕಿತರಲ್ಲಿ ಗಂಭೀರ ಅನಾರೋಗ್ಯ ಉಂಟುಮಾಡುತ್ತದೆ ಎಂದು ಅಧ್ಯಯನಗಳಿಂದ ಬಹಿರಂಗವಾಗಿತ್ತು.
ಆದರೆ ಸದ್ಯ, ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರಲ್ಲಿ ಓಮಿಕ್ರಾನ್ ರೂಪಾಂತರಿ ಕೂಡ ಗಂಭೀರ ಅನಾರೋಗ್ಯ ಉಂಟುಮಾಡುತ್ತಿದೆ ಎಂದು ಬಯಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಿಕ್ಕಿರುವ ದಾಖಲೆಗಳ ಪ್ರಕಾರ , ಐಸಿಯುನಲ್ಲಿರುವ ಕೊರೊನಾ ಸೋಂಕಿತರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 28 ಸೋಂಕಿತರ ಪೈಕಿ 9 ಸೋಂಕಿತರು, ಅಂದರೆ 31% ಕೇಸ್‌ಗಳು ಓಮಿಕ್ರಾನ್ ಬಾಧೆಗೆ ತುತ್ತಾಗಿರುವವರದ್ದು ಎಂದು ಖಾತ್ರಿಯಾಗಿದೆ ಎಂದು ಬಿಬಿಎಂಪಿ (ಆರೋಗ್ಯ ವಿಭಾಗ) ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ಹೇಳಿದ್ದಾರೆ.
ಬಾಲಿವುಡ್ ಯುವ ಜೋಡಿಯ ಪ್ರೇಮ್ ಕಹಾನಿ…! ಅಧಿಕೃತವಾಯ್ತಾ ಅನನ್ಯಾ-ಇಶಾನ್ ಲವ್ ಸ್ಟೋರಿ..?
ಮುಂದಿನ ಅಧ್ಯಯನದ ಭಾಗವಾಗಿ ಸೋಂಕಿತರು ಕೊರೊನಾ ನಿರೋಧಕ ಲಸಿಕೆಯ ಡೋಸ್‌ಗಳನ್ನು ಪಡೆದ ಕುರಿತು, ವಂಶವಾಹಿಗಳ ಕುರಿತು, ಸೋಂಕಿತರು ವಾಸಮಾಡುವ ಅಥವಾ ಹೆಚ್ಚು ಗಂಟೆ ಕೆಲಸ ಮಾಡುವ ಸ್ಥಳಗಳ ಕುರಿತು ಅಧ್ಯಯನ ನಡೆಸಲಾಗುವುದು. ಇವುಗಳಿಂದ ಓಮಿಕ್ರಾನ್ ಎಷ್ಟು ಅಪಾಯಕಾರಿ ಆಗುತ್ತಿದೆ ಎಂಬ ಸುಳಿವು ಸಿಗಲಿದೆ ಎಂದು ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ.
ಆರ್‌ಟಿ-ಪಿಸಿಆರ್ ಕಿಟ್‌ಗಳಲ್ಲಿ ಕೆಲವೊಮ್ಮೆ ಓಮಿಕ್ರಾನ್ ಪತ್ತೆ ಕಷ್ಟವಾಗುತ್ತಿದೆ. ಯಾಕೆಂದರೆ, ಓಮಿಕ್ರಾನ್ ವೈರಾಣುವು ತನ್ನ ಮೂಲರಚನೆಯ ಪ್ರೊಟೀನ್ ಅನ್ನು ಬಹಳಷ್ಟು ಬಾರಿ ಮಾರ್ಪಡಿಸಿಕೊಂಡಿದೆ. ಪರೀಕ್ಷೆಯ ಕಿಟ್‌ಗಳಲ್ಲಿರುವ ಪ್ರೈಮರ್‌ಗಳಿಗೆ ಓಮಿಕ್ರಾನ್‌ನಲ್ಲಿನ ನ್ಯೂಕ್ಲಿಕ್ ಆ್ಯಸಿಡ್ ಪತ್ತೆ ಮಾಡಲು ಆಗುವುದಿಲ್ಲ. ಹೀಗಾಗಿ ವೈರಲ್ ಫೀವರ್ ಮಾದರಿಯಲ್ಲಿ ಕೊರೊನಾ ಪ್ರಸರಣ ವ್ಯಾಪಕವಾಗುತ್ತಿದೆ. ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿ, ಕೋಮಾದಲ್ಲಿರುವ ರೋಗಿಗಳಿಗೂ ಕೊರೊನಾ ಸೋಂಕು ಪಾಸಿಟಿವ್ ಎಂದು ವರದಿಗಳು ಬರುತ್ತಿವೆ ಎಂದು ಆತಂಕವನ್ನು ಅವರು ಹೊರಹಾಕಿದ್ದಾರೆ.