
ಕೊರೊನಾ ಹೊಸ ರೂಪಾಂತರ ಒಮಿಕ್ರೋನ್ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಡೆಲ್ಟಾಗಿಂತ ಒಮಿಕ್ರಾನ್ ವೇಗವಾಗಿ ಹರಡುತ್ತದೆ. ಯಾವುದೇ ರೋಗಲಕ್ಷಣಗಳು ಕಾಣಿಸಿದ್ರೂ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ಚಳಿಗಾಲದಲ್ಲಿ ಜ್ವರ ಮತ್ತು ಶೀತ ಸಾಮಾನ್ಯ. ಆದ್ರೆ ಇದನ್ನೂ ನಿರ್ಲಕ್ಷಿಸುವಂತಿಲ್ಲ. ಯಾಕೆಂದ್ರೆ ಇದು ಒಮಿಕ್ರಾನ್ ಕೂಡ ಆಗಿರಬಹುದು.
ತಜ್ಞರ ಪ್ರಕಾರ, ಒಮಿಕ್ರೋನ್ ಲಸಿಕೆ ಹಾಕಿದವರಲ್ಲೂ ಕಾಣಿಸಿಕೊಳ್ತಿದೆ. ಒಂದು ವೇಳೆ ಒಮಿಕ್ರೋನ್ ಸೋಂಕಿಗೊಳಗಾದವರ ಸಂಪರ್ಕಕ್ಕೆ ಬಂದಿದ್ದರೆ, ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೆ ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.
ಕೊರೊನಾ ಸಂಪರ್ಕಕ್ಕೆ ಬಂದ ನಾಲ್ಕೈದು ದಿನಗಳಲ್ಲಿ ಒಮಿಕ್ರೋನ್ ಲಕ್ಷಣ ನಿಮಗೆ ಕಾಣಿಸಿಕೊಳ್ಳಬಹುದು. ಹಾಗಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವರದಿ ನಕಾರಾತ್ಮಕವಾಗಿ ಬರುವವರೆಗೆ ಮನೆಯಲ್ಲಿ ಬಂಧಿಯಾಗಿರಿ. ಕೆಲವೊಮ್ಮೆ ರೋಗ ಲಕ್ಷಣ ಕಾಣಿಸಿಕೊಂಡ್ರೂ ವರದಿ ನಕಾರಾತ್ಮಕವಾಗಿ ಬರುತ್ತದೆ. ಹಾಗಾಗಿ ಪದೇ ಪದೇ ಪರೀಕ್ಷೆಗೆ ಒಳಗಾಗಬೇಕು.
ಕೊರೊನಾ 14 ದಿನಗಳವರೆಗೆ ಇರುತ್ತದೆ. ವರದಿ ನಕಾರಾತ್ಮಕವಾಗಿರಲಿ ಬಿಡಲಿ, ಕೊರೊನಾ ಸೋಂಕಿತ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದರೆ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಿ. ಯಾರ ಸಂಪರ್ಕಕ್ಕೂ ಬರಬೇಡಿ.
ಉಸಿರಾಟದ ತೊಂದರೆ, ನಿರಂತರ ಎದೆ ನೋವು ಅಥವಾ ಒತ್ತಡ, ಚರ್ಮ ಮತ್ತು ಉಗುರುಗಳ ಬಣ್ಣ ಬದಲಾವಣೆ ಮುಖ್ಯ ಲಕ್ಷಣವಾಗಿದ್ದು, ಇದು ಕಾಣಿಸಿಕೊಳ್ತಿದ್ದಂತೆ ಪರೀಕ್ಷೆಗೆ ಒಳಗಾಗಿ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
ಸಂಪರ್ಕಕ್ಕೆ ಬಂದಿದ್ದೀರಿ ಎಂಬುದು ಗೊತ್ತಾಗ್ತಿದ್ದಂತೆ ಆತಂಕ್ಕೆ ಒಳಗಾಗಬೇಡಿ. ವೈದ್ಯರ ಸಲಹೆಯಂತೆ ಆಹಾರ ಸೇವನೆ ಮಾಡಿ. ಮಾತ್ರೆಗಳನ್ನು ಸೇವಿಸಿ. ಸಮಸ್ಯೆ ಉಲ್ಬಣಿಸಿದೆ ಎನ್ನಿಸಿದ್ರೆ ಆಸ್ಪತ್ರೆಗೆ ದಾಖಲಾಗಿ.