ಒಲಂಪಿಕ್ ನಲ್ಲಿ ಪದಕ ಸಂಪಾದಿಸೋದು ಅಂದರೆ ಸುಲಭದ ಮಾತಲ್ಲ. ವರ್ಷಗಳ ಕಠಿಣ ಅಭ್ಯಾಸ, ಶ್ರದ್ಧೆ ಇದ್ದರೆ ಮಾತ್ರ ಈ ಪದಕ ಒಲಿಯೋಕೆ ಸಾಧ್ಯ.
ಘಟಾನುಘಟಿ ಆಟಗಾರರಿಂದಲೇ ತುಂಬಿರುವ ಈ ಕ್ರೀಡಾಕೂಟದಲ್ಲಿ 58 ವರ್ಷದ ಆಟಗಾರ ಪದಕ ಸಂಪಾದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
7 ಬಾರಿ ಒಲಿಂಪಿಯನ್ ಆಗಿರುವ ಕುವೈತ್ನ ಅಬ್ದುಲ್ಲ ಅಲ್ರಾಶಿದಿ ತಮ್ಮ 58ನೇ ವಯಸ್ಸಿಗೆ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನ ಸಂಪಾದಿಸಿದ್ದಾರೆ. ಮಾತ್ರವಲ್ಲದೇ 2024ರಲ್ಲಿ ಪ್ಯಾರಿಸ್ನಲ್ಲಿ ಚಿನ್ನದ ಬೇಟೆ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಈ ವೇಳೆಗೆ ಅವರು 60 ವರ್ಷ ದಾಟಲಿದ್ದಾರೆ.
ನನಗೆ ಈಗ 58 ವರ್ಷ ವಯಸ್ಸು. ನಾನು ಎಲ್ಲರಿಗಿಂತ ವಯಸ್ಸಿನಲ್ಲಿ ಹಿರಿಯನಾದ ಶೂಟರ್ ಆಗಿದ್ದೇನೆ. ಹೀಗಾಗಿ ಈ ಕಂಚಿನ ಪದಕವು ನನಗೆ ಚಿನ್ನದ ಪದಕಕ್ಕೆ ಸಮನಾಗಿದೆ. ಈ ಪದಕವು ನನಗೆ ತುಂಬಾನೇ ಖುಷಿ ನೀಡಿದೆ. ಆದರೆ ಮುಂದಿನ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಸಂಪಾದಿಸುತ್ತೇನೆ ಎಂದು ಅಬ್ದುಲ್ಲ ಹೇಳಿದ್ದಾರೆ.
ಚಿನ್ನದ ಪದಕವನ್ನ ಸಂಪಾದಿಸುವ ಅದೃಷ್ಟ ನನಗೆ ಇರಲಿಲ್ಲ. ಆದರೆ ಈ ಕಂಚಿನ ಪದಕವೂ ನನಗೆ ಖುಷಿ ಕೊಟ್ಟಿದೆ. ಅಲ್ಲಾನ ಸಹಾಯದಿಂದ ನಾನು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಸಂಪಾದಿಸುತ್ತೇನೆ. ಆಗ ನನಗೆ 61 ವರ್ಷ ಪ್ರಾಯವಾಗಿರಲಿದೆ ಎಂದು ಹೇಳಿದ್ರು.