ನವದೆಹಲಿ: ಯಾವುದೇ ಸಾಮಾನ್ಯ ಹೋಟೆಲ್ ಹೋಗಿ ಏನೇ ಒಂದು ತಿನಿಸು ಆರ್ಡರ್ ಮಾಡಿದರೂ ಕನಿಷ್ಠ 60-70 ರೂಪಾಯಿಗಳಾಗುತ್ತವೆ. ಇನ್ನು ನಾಲ್ಕು ದುಬಾರಿಯ ತಿನಿಸು ಆರ್ಡರ್ ಮಾಡಿದರೆ ? ಬಿಲ್ ಸಾವಿರ ರೂಪಾಯಿ ಆಗುತ್ತದೆ. ಆದರೆ ಎಲ್ಲವೂ ಸೇರಿ ಕೇವಲ ರೂ. 26 ಎಂದರೆ ನಂಬುವಿರಾ?
ಈಗಂತೂ ಇದು ಸಾಧ್ಯವೇ ಇಲ್ಲ ಬಿಡಿ. ಇಂಥದ್ದೊಂದು ಹೋಟೆಲ್ ಬಿಲ್ 1985 ರದ್ದು. 37 ವರ್ಷಗಳ ಹಿಂದೆ ಉತ್ತರ ಭಾರತೀಯ ಊಟದ ಬೆಲೆ ಬರೀ ರೂ. 26. ದೆಹಲಿಯ ಲಜಪತ್ನ ಲಾಝೀಜ್ ರೆಸ್ಟೋರೆಂಟ್ನಲ್ಲಿ 1985ರ ಡಿಸೆಂಬರ್ 20ರಂದು ಹರಿಯಲಾದ ಬಿಲ್ ಇದು. ಈ ಬಿಲ್ ಅನ್ನು ಸ್ವತಃ ರೆಸ್ಟೋರೆಂಟ್ ಹಂಚಿಕೊಂಡಿದೆ.
ಈ ಪೋಸ್ಟ್ ಅನ್ನು 2013ರ ಆಗಸ್ಟ್ 12ರಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ವೈರಲ್ ಆಗಿದೆ. ಶಾಹೀ ಪನೀರ್, ದಾಲ್ ಮಖನೀ, ರಾಯ್ತಾ, ಚಪಾತಿಯನ್ನು ಯಾರೋ ಗ್ರಾಹಕರು ಅಂದು ಆರ್ಡರ್ ಮಾಡಿದ್ದರು. ನಾಲ್ಕೂ ಖಾದ್ಯಗಳ ಬೆಲೆ ಎರಡಂಕಿಯನ್ನು ದಾಟಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.