ಕ್ಯಾಂಪಸ್ಗಳಲ್ಲಿ ನಡೆಯುವ ಆತ್ಮಹತ್ಯೆಗಳನ್ನು ತಡೆಯುವ ಸಲುವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಗಳು ಹಾಸ್ಟೆಲ್ಗಳ ಕೊಠಡಿಗಳಲ್ಲಿ ಅಳವಡಿಸಿದ್ದ ಸೀಲಿಂಗ್ ಫ್ಯಾನ್ಗಳನ್ನು ತೆಗೆಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಾಸ್ಟೆಲ್ ಕೊಠಡಿಗಳಲ್ಲಿನ ಸೀಲಿಂಗ್ ಫ್ಯಾನ್ಗಳನ್ನು ತೆಗೆದು ವಾಲ್ ಮೌಂಟೆಂಡ್ ಫ್ಯಾನ್ಗಳನ್ನು ಅಳವಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಕೌನ್ಸಿಲ್ನ ಚೇರ್ಮನ್ಗೆ ವಿದ್ಯಾರ್ಥಿಗಳು ಬರೆದ ಆಂತರಿಕ ಇ ಮೇಲ್ನಲ್ಲಿ ಸೀಲಿಂಗ್ ಫ್ಯಾನ್ ಬದಲು ವಾಲ್ಮೌಂಟೆಡ್ ಫ್ಯಾನ್ಗಳನ್ನು ಅಳವಡಿಸುವ ಬಗ್ಗೆ ಹೇಳಿದ್ದಾರೆ.
ಮುಂದಿನ 15 ದಿನಗಳಲ್ಲಿ ಎಲ್ಲಾ ಕೊಠಡಿಗಳ ಫ್ಯಾನುಗಳನ್ನು ಬದಲಾಯಿಸಲಾಗುತ್ತದೆ ಎಂದು ಇಲ್ಲಿನ ಕೆಲಸಗಾರರು ಹೇಳಿದ್ದಾರೆ. ಹಾಸ್ಟೆಲ್ಗಳಲ್ಲಿ ಆತ್ಮಹತ್ಯೆಯನ್ನು ತಡೆಯುವ ಉದ್ದೇಶದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ಸಂಬಂಧ ನಡೆಸಲಾದ ಸಮೀಕ್ಷೆಯಲ್ಲಿ 89 ಪ್ರತಿಶತ ವಿದ್ಯಾರ್ಥಿಗಳು ಸೀಲಿಂಗ್ ಫ್ಯಾನ್ಗಳನ್ನು ತೆಗೆದು ಹಾಕುತ್ತಿರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಈ ವಿಚಾರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾವ ಫ್ಯಾನ್ ಇದ್ದರೂ ಓಕೆ ಎಂದಿದ್ದಾರೆ.
ಇನ್ನು 85 ಪ್ರತಿಶತ ವಿದ್ಯಾರ್ಥಿಗಳು ಸೀಲಿಂಗ್ ಫ್ಯಾನ್ಗಳನ್ನು ತೆಗೆದು ಹಾಕುವುದರಿಂದ ಆತ್ಮಹತ್ಯೆಯನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ.