ಆಟಿಕೆ ಪಿಸ್ತೂಲ್ ಬಳಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿದಂತೆ ಐವರು ಕಾರು ತೆಗೆದುಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಟಿಕೆ ಗನ್ ಬಳಕೆ ಮಾಡಿ ಕಾರು ಚಾಲಕನನ್ನು ಬೆದರಿಸಿದ ಐವರು ಕಾರನ್ನು ಅಪಹರಿಸಿದ್ದಾರೆ. ಇದರಲ್ಲಿ ಓರ್ವ ಬಿಟೆಕ್ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಮತ್ತೊಬ್ಬ ಜಸ್ಟ್ ಡಯಲ್ನ ಮಾಜಿ ಉದ್ಯೋಗಿಯಾಗಿದ್ದ ಎನ್ನಲಾಗಿದೆ.
ಪ್ರಕರಣ ಸಂಬಂಧ ನಾಲ್ಕು ದಿನಗಳ ಹಿಂದೆ ಸೆಕ್ಟರ್ 58ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಿಸ್ತೂಲ್ ಗನ್ಪಾಯಿಂಟ್ ಹಿಡಿದು ಬೆದರಿಸಿ ನನ್ನ ಕಾರನ್ನು ತೆಗದುಕೊಂಡು ಹೋಗಿದ್ದಾರೆ ಎಂದು ಚಾಲಕ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ ವೇಳೆ ಐವರು ಆರೋಪಿಗಳು ಗನ್ ಆಕಾರದ ಗ್ಯಾಸ್ ಲೈಟರ್ ಹಿಡಿದು ಬೆದರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಮಾತನಾಡಿದ ನೋಯ್ಡಾ ಡಿಸಿಪಿ ರಾಜೇಶ್ ಎಸ್, ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೊದಲು ಸಿ ಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದೆವು. ಇಲ್ಲಿ ನಮಗೆ ಆರೋಪಿಗಳ ಗುರುತು ಪತ್ತೆಯಾಯ್ತು. ಯುವಕರ ಗುಂಪು ಅದೇ ದಿನ ಸಂಜೆ ಇನ್ನೊಂದು ಕಾರನ್ನು ಇದೇ ರೀತಿ ಅಪಹರಿಸಲು ಮುಂದಾಗಿ ಅಸಫಲವಾಗಿತ್ತು. ಇದಾದ ಬಳಿಕ ಐ 20 ಕಾರು ಬರುತ್ತಿದ್ದಂತೆಯೇ ಆಟಿಕೆ ಗನ್ ತೋರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ರು.
ಬಂಧಿತರನ್ನು ವಿಕಾಸ್, ಕಾರ್ತಿಕ್, ಯುವರಾಜ್ ವಿನಾಯಕ್, ಅಭಿಷೇಕ್ ಶರ್ಮಾ ಹಾಗೂ ಶಿವಂ ವಾಲ್ಮಿಕಿ ಎಂದು ಗುರುತಿಸಲಾಗಿದೆ.