alex Certify ಕೇಂದ್ರದಿಂದ ಮಹತ್ವದ ನಿರ್ಧಾರ: ವಿವಾದಿತ ಅತ್ಯಾಚಾರ ಪ್ರಚಾರದ ಡಿಯೋ ಜಾಹೀರಾತುಗಳಿಗೆ ಬ್ರೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರದಿಂದ ಮಹತ್ವದ ನಿರ್ಧಾರ: ವಿವಾದಿತ ಅತ್ಯಾಚಾರ ಪ್ರಚಾರದ ಡಿಯೋ ಜಾಹೀರಾತುಗಳಿಗೆ ಬ್ರೇಕ್

ನವದೆಹಲಿ: ದೆಹಲಿ ಮಹಿಳಾ ಆಯೋಗದ ಪತ್ರದ ಬೆನ್ನಲ್ಲೇ ಸ್ತ್ರೀದ್ವೇಷ ಮತ್ತು ಅತ್ಯಾಚಾರ ಉತ್ತೇಜಿಸುವ ಡಿಯೋಡರೆಂಟ್ ಮತ್ತು ಬಾಡಿ-ಸ್ಪ್ರೇ ಜಾಹೀರಾತುಗಳ ಪ್ರಸಾರಕ್ಕೆ ಕೇಂದ್ರ ಬ್ರೇಕ್ ಹಾಕಿದೆ.

ಜಾಹೀರಾತು ಏಜೆನ್ಸಿಗಳು ಮತ್ತು ಕಂಪನಿಗಳಿಗೆ ಕೇಂದ್ರದಿಂದ ಈ ಕುರಿತಾಗಿ ಸೂಚನೆ ನೀಡಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎಲ್ಲಾ ವಿವಾದಾತ್ಮಕ ಡಿಯೋಡರೆಂಟ್ ಜಾಹೀರಾತುಗಳನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದು, ಜಾಹೀರಾತು ಕೋಡ್ ಪ್ರಕಾರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸ್ತ್ರೀದ್ವೇಷದ ಜಾಹೀರಾತನ್ನು ಪ್ರಸಾರ ಮಾಡದಂತೆ ಒತ್ತಾಯಿಸಿ ದೆಹಲಿ ಮಹಿಳಾ ಆಯೋಗವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಪರ್ಫ್ಯೂಮ್ ಬ್ರ್ಯಾಂಡ್ ಲೇಯರ್ ಶಾಟ್‌ ನ ವಿವಾದಾತ್ಮಕ ಜಾಹೀರಾತನ್ನು ನೆಟಿಜನ್‌ ಗಳು ಟೀಕಿಸಿದ ನಂತರ ವಿವಾದ ಹುಟ್ಟಿಕೊಂಡಿತ್ತು. ಜಾಹೀರಾತು “ಗ್ಯಾಂಗ್-ರೇಪ್ ಸಂಸ್ಕೃತಿಯನ್ನು ಉತ್ತೇಜಿಸಿದೆ” ಎಂದು ಮಹಿಳಾ ಆಯೋಗ ಹೇಳಿದ್ದು, ಈ ವಿಷಯದ ಬಗ್ಗೆ ದೆಹಲಿ ಪೊಲೀಸರಿಗೆ ನೋಟಿಸ್ ಸಹ ನೀಡಿದೆ.

ಸುಗಂಧ ದ್ರವ್ಯದ ಬ್ರಾಂಡ್‌ ನ ಸ್ತ್ರೀದ್ವೇಷದ ಜಾಹೀರಾತು ಗಮನಿಸಿ ಸಚಿವ ಠಾಕೂರ್‌ ಗೆ ಬರೆದ ಪತ್ರದಲ್ಲಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು, ಜಾಹೀರಾತನ್ನು ನಿಷೇಧಿಸಲು ಸಚಿವಾಲಯದ ತುರ್ತು ಕ್ರಮವನ್ನು ಕೋರಿದ್ದರು.

ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಇಂತಹ “ಕೊಳಕು” ಜಾಹೀರಾತುಗಳನ್ನು ಮತ್ತೆ ಎಂದಿಗೂ ಹಾಕದಂತೆ ಖಚಿತಪಡಿಸಿಕೊಳ್ಳಲು ಕ್ರಮಕೈಗೊಳ್ಳಬೇಕು. ಇತರ ಕಂಪನಿಗಳು ಅಗ್ಗದ ಪ್ರಚಾರಕ್ಕಾಗಿ ಕೊಳಕು ತಂತ್ರ ಅನುಸರಿಸುವುದನ್ನು ತಡೆಯಲು ಭಾರೀ ದಂಡ ಹಾಕಬೇಕೆಂದು ಒತ್ತಾಯಿಸಿದ್ದಾರೆ.

ಜೂನ್ 9 ರೊಳಗೆ ಈ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳ ವರದಿಯನ್ನು ನೀಡುವಂತೆ ದೆಹಲಿ ಪೊಲೀಸರಿಗೆ ತಿಳಿಸಲಾಗಿದೆ.

ಪುರುಷತ್ವವನ್ನು ಕೆಟ್ಟ ರೂಪದಲ್ಲಿ ಉತ್ತೇಜಿಸುವ ಮತ್ತು ಸಾಮೂಹಿಕ ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಈ ಸೃಜನಶೀಲ ಪ್ರಕ್ರಿಯೆ ಯಾವುದು? ಎಂದು ಪ್ರಶ್ನಿಸಿದ ಅವರು, ಎಫ್‌ಐಆರ್ ದಾಖಲಿಸಬೇಕು, ಜಾಹೀರಾತುಗಳನ್ನು ತೆಗೆದುಹಾಕಬೇಕು. ಈ ಕಂಪನಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಬೇಕು ಎಂದು ಹೇಳಿದ್ದಾರೆ.

ಲೇಯರ್ ಶಾಟ್, ಪರ್ಫ್ಯೂಮ್ ಮತ್ತು ಬಾಡಿ ಸ್ಪ್ರೇ, ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ಬಗ್ಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ ಫಾರ್ಮ್‌ ನ ಬಳಕೆದಾರರು ತೀವ್ರವಾಗಿ ಟೀಕಿಸಿದ್ದರು. ಇಂತಹ ಅಸಹ್ಯಕರ ವಿಷಯವನ್ನು ಯಾರು ಅನುಮೋದಿಸಿದ್ದಾರೆ ಎಂದು ಪ್ರಶ್ನಿಸಿದ್ದರು.

ಈ ವಿವಾದಾತ್ಮಕ ಜಾಹೀರಾತನ್ನು ತೆಗೆದುಹಾಕುವಂತೆ ಕೇಂದ್ರವು ಯೂಟ್ಯೂಬ್ ಮತ್ತು ಟ್ವಿಟರ್‌ ಗೆ ನಿರ್ದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...